ದೇವಸ್ಥಾನದ ಬಾಗಿಲು ಮುರಿದು ಸೊತ್ತು ಕಳವು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಬಂಟ್ವಾಳ: ಬಿ.ಸಿ.ರೋಡು ಸಮೀಪದ ಮೊಡಂಕಾಪುವಿನ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಎದುರಿನ ಬಾಗಿಲು ಮುರಿದುಪುರಾತನ ಕಾಲದ ದೇವರ ಸಾಮಾಗ್ರಿಗಳನ್ನು ಕಳವುಗೈದ ಘಟನೆ ನಡೆದಿದೆ.
ಈ ಬಗ್ಗೆ ಸುನಿಲ್ ಕುಮಾರ್ ಕೆ.ಎನ್. ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರು ಪ್ರಸುತ್ತ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೇಪಳಗುರಿ ಎಂಬಲ್ಲಿ ವಾಸವಿದ್ದು, ಇವರ ಮೂಲ ಮನೆಯು ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಫುನಲ್ಲಿ ಇರುವುದಾಗಿದೆ.
ಪ್ರತಿ ಸಂಕ್ರಮಣದಿನದಂದು ಮೊಡಂಕಾಪಿಗೆ ಬಂದು ದೇವರಿಗೆ ಪೂಹೆ ನೆರವೇರಿಸಿ ವಾಪಾಸ್ ಮಂಚಿಗೆ ಹೋಗುವುದಾಗಿದೆ. ಜು.16 ರಂದು ಸಂಜೆ ಬಂದು ಪೂಜೆ ಮುಗಿಸಿ ರಾತ್ರಿ 8 ಗಂಟೆಗೆ ಮಂಚಿಯ ಮನೆಗೆ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಜು.23 ರಂದು ಮದ್ಯಾಹ್ನ ಮೊಡಂಕಾಪು ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಒಳಗಿದ್ದ ಕೆಲವೊಂದು ಪುರಾತನ ಕಾಲದ ದೇವರ ಬೆಳ್ಳಿಯ ಸಾಮಾಗ್ರಿಗಳು, 1 ಕೊಪ್ಪರಿಗೆ, ತಲಾ 10 ದೀಪಗಳು, ಹಿತ್ತಾಳೆಯ ಗಿಂಡೆ, 5 ಹಿತ್ತಾಳೆಯ ಹರಿವಾಣ, ತಾಮ್ರದ ಮಡಿಕೆ, 2 ತಾಮ್ರದ ಕೊಡಪಾನ, 1 ತಾಮ್ರದ ಅಡ್ಯರ ಹಾಗೂ ಸ್ಟೀಲ್ ಸಾಮಾಗ್ರಿಗಳನ್ನು ಕಳವುಗೈದಿರುವುದು ಕಂಡು ಬಂದಿದೆ. ಹಾಗೆಯೆ ಮನೆ ಕಪಾಟನ್ನು ತೆರೆದು ಹಣಕ್ಕಾಗಿ ಜಾಲಾಡಿದ್ದು, ಅದರಲ್ಲಿದ್ದು ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳವಾದ ಸೊತ್ತಿನ ಮೌಲ್ಯ 57 ಸಾ.ರೂ. ಎಂದು ಅಂದಾಜಿಸಲಾಗಿದೆ.
ಸಿಸಿ ಕ್ಯಾಮರದಲ್ಲಿ ಸೆರೆ:
ಈ ಕಳವು ಕೃತ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೂವರು ವ್ಯಕ್ತಿಗಳು ಸೊತ್ತುಗಳನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಸಾಗಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ ಎಂದು ತಿಳಿದುಬಂದಿದೆ.
ಗುರುವಾರ ಮನೆಯ ಆವರಣದಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅವರನ್ನು ಪ್ರಶ್ನಿಸಿದ್ದಾರೆನ್ನಲಾಗಿದೆ. ಆಗ ದೇವಸ್ಥಾನದ ಕೆಲಸಕ್ಕೆ ಬಂದಿರುವುದಾಗಿ ತಿಳಿಸಿ ಯಾಮಾರಿಸಲು ಯತ್ನಿಸಿದ್ದಾರೆ. ಬಳಿಕ ಸಂಬಂಧಪಟ್ಟವರನ್ನು ಸಂಪರ್ಕಿಸಿದಾಗ ಕೆಲಸಕ್ಕೆ ಯಾರನ್ನೂ ನಿಯೋಜಿಸಿಲ್ಲ ಎಂದು ತಿಳಿದುಬಂದಿತ್ತು.
ಇದರಿಂದ ಅನುಮಾನಗೊಂಡ ಸ್ಥಳೀಯರು ದೇವಸ್ಥಾನದಲ್ಲಿ ಪರಿಶೀಲಿಸಿದಾಗ, ಅವರ ಗೋಣಿಚೀಲದಲ್ಲಿ ಪಾತ್ರೆಗಳು ಪತ್ತೆಯಾಗಿದ್ದಲ್ಲದೆ, ಕಪಾಟಿನ ವಸ್ತುಗಳಿ ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ಶಂಕಿತರನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.