ಪುತ್ತೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ-ಮೋದಿ ಸರ್ಕಾರದಲ್ಲಿ ದೌರ್ಜನ್ಯ ನಿರಂತರ: ಉಷಾ ಅಂಚನ್
ನೀಟ್ ಪರೀಕ್ಷೆ ಅಕ್ರಮ-ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿ ಸಮೂಹದ ಮೇಲೆ ನಡೆದ ದೌರ್ಜನ್ಯ ಮತ್ತು ಪ್ರತಿಭಟನೆ ನಡೆಸಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಂಧನ, ದಬ್ಬಾಳಿಕೆ ವಿರೋಧಿಸಿ ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪುತ್ತೂರು ಕಾಂಗ್ರೆಸ್ ಉಸ್ತುವಾರಿ ಚಿತ್ತರಂಜನ್ ಶೆಟ್ಟಿ ಮಾತನಾಡಿ, ನೀಟ್ ಅಕ್ರಮದಿಂದ ನೊಂದು 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವ ಸಮುದಾಯದ ಬದುಕಿನ ಜತೆ ಮೋದಿ ಸರಕಾರ ಚೆಲ್ಲಾಟವಾಡುತ್ತಿದೆ. ಲಾಠಿ ಚಾಜ್೯ನಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ಪ್ರತೀ ಹನಿ ರಕ್ತಕ್ಕೂ ಮೋದಿ ಸರಕಾರ ಬೆಲೆ ಕೊಡುವ ದಿನ ಬರಲಿದೆ. ವಿದ್ಯಾರ್ಥಿ ಶಕ್ತಿಯನ್ನು ಎದುರು ಹಾಕಿಕೊಂಡ ಯಾವ ಸರ್ಕಾರವೂ ಇದುವರೆಗೆ ಉಳಿದಿಲ್ಲ. ಮೋದಿ ಸರ್ಕಾರಕ್ಕೂ ಇದೇ ಸ್ಥಿತಿ ಬರಲಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತನಾಡಿ, ದಿಲ್ಲಿಯ ನಡೆದ ಪ್ರತಿಭಟನೆ ಸಂದರ್ಭ ಆರೆಸ್ಸೆಸ್ ಗೂಂಡಾಗಳು ಪೊಲೀಸರ ಜತೆ ಸೇರಿ ವಿದ್ಯಾರ್ಥಿಗಳು ಮತ್ತು ರಾಹುಲ್ ಗಾಂಧಿ ಮೇಲೆ ದಾಳಿ ಮಾಡಿದ್ದಾರೆ. ವಿದ್ಯಾರ್ಥಿಗಳ ಹಿತಾಸಕ್ತಿ ಮೋದಿ ಅವರಿಗೆ ಮುಖ್ಯವಾಗಿಲ್ಲ. ಶಬರಿಮಲೆಯಲ್ಲಿ ಅಯ್ಯಪ್ಪ ದೇವರ ಚಿನ್ನಾಭರಣ ಲೂಟಿ ಮಾಡಿದ ಎಡ ಪಕ್ಷಗಳ ಸರ್ಕಾರ ಚುನಾವಣೆಯಲ್ಲಿ ಪರಾಜಯಗೊಂಡಿದೆ. ಈಗ ಕೇಂದ್ರದ ಮೋದಿ ಸರ್ಕಾರದಡಿಯಲ್ಲಿ ಅಯೋಧ್ಯೆಯ ರಾಮ ದೇವರ ಹುಂಡಿಯನ್ನೇ ಕಳವು ಮಾಡಲಾಗಿದೆ. ಮುಂದಿನ ಚುನಾವಣೆಯಲ್ಲಿ ರಾಮನ ಶಾಪ ಬಿಜೆಪಿಗೆ ತಟ್ಟಲಿದೆ ಎಂದರು.
ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ದ.ಕ. ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ ಪ್ರತಿಭಟನೆಯಲ್ಲಿ ಮಾತನಾಡಿದರು.
ಪುತ್ತೂರು, ವಿಟ್ಲ ಮತ್ತು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪಕ್ಷಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಮ್ಮದ್ ಬಡಗನ್ನೂರು ಸ್ವಾಗತಿಸಿದರು. ಪುತ್ತೂರು ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಅಮಳ ರಾಮಚಂದ್ರ, ಜೋಕಿಂ ಡಿಸೋಜ, ಪ್ರಸಾದ್ ಕೌಶಲ್ ಶೆಟ್ಟಿ, ಉಮಾನಾಥ ಶೆಟ್ಟಿ ಪೆರ್ನೆ, ಯು.ಟಿ. ತೌಸಿಫ್, ಪ್ರವೀಣ್ ಆಳ್ವ, ಅಮರನಾಥ ಗೌಡ ಬಪ್ಪಳಿಗೆ, ವಲೇರಿಯನ್ ಡಯಾಸ್, ಎಂ.ಬಿ. ವಿಶ್ವನಾಥ ರೈ, ರಾಮಣ್ಣ ಪಿಲಿಂಜ, ರಮಾನಾಥ ವಿಟ್ಲ, ಚಂದ್ರಕಲಾ ಮುಕ್ವೆ, ಅನ್ವರ್ ಖಾಸಿಂ ಮತ್ತಿತರರು ಉಪಸ್ಥಿತರಿದ್ದರು.