ಅಸ್ತ್ರ ಲಕ್ಕಿ ಸ್ಕೀಮ್ ವಂಚನೆ: ಕಚೇರಿಗೆ ನುಗ್ಗಿದ ಜನತೆ
ಅಸ್ತ್ರ ಹೆಸರಲ್ಲಿ ಕಳೆದ 3-4 ವರ್ಷಗಳಲ್ಲಿ ಮೂರು ಸೀಸನ್ ಲಕ್ಕಿ ಸ್ಕೀಮ್ ಮಾಡಿದ್ದು ಇದರಲ್ಲಿ ಅಂದಾಜು 50 ಸಾವಿರದಷ್ಟು ಜನರು ತಿಂಗಳ ಕಂತು ಹಣ ಕಟ್ಟಿದ್ದಾರೆ. ಪ್ರತಿ ಸ್ಕೀಮ್ ಮುಕ್ತಾಯದಲ್ಲಿ ಅದೃಷ್ಟ ಸಿಗದ ಎಲ್ಲರಿಗೆ ಹಣ ಹಿಂತಿರುಗಿಸಬೇಕಿದ್ದರೂ, ಏಜಂಟರು ಅವರೆಲ್ಲರನ್ನೂ ಮುಂದಿನ ಸ್ಕೀಮಿಗೆ ಸೇರಿಸಿ ಹಣ ಕಟ್ಟುವಂತೆ ಮಾಡುತ್ತಿದ್ದರು. ಇದೀಗ ಮೂರು ಸೀಸನಲ್ಲಿ ಹಣ ಕಟ್ಟಿದರೂ, ಒಂದು ಬಾರಿಯೂ ಹಣ ನೀಡದೆ ವಂಚಿಸಲಾಗಿದೆ.
ನಗರದ ನವಭಾರತ್ ಸರ್ಕಲ್ ಬಳಿಯಿರುವ ಅಸ್ತ್ರ ಗ್ರೂಪ್ ಕಚೇರಿಗೆ ಇಂದು ಬೆಳಗ್ಗಿನಿಂದಲೇ ನೂರಾರು ಜನರು ಬಂದಿದ್ದು ಗಲಾಟೆ ಆರಂಭಿಸಿದ್ದಾರೆ. ಲಂಚು ಎಲ್ಲಿ ಎಂದು ವಿಚಾರಿಸಿದ್ದಾರೆ. ಪ್ರತಿ ಬಾರಿ ದಿನಾಂಕ ಕೇಳಿ ಸಾಕಾಗಿದೆ, ಕೂಡಲೇ ಎದುರು ಬರಲು ಹೇಳಿ ಎಂದು ಅಲ್ಲಿರುವ ಏಜಂಟರನ್ನು ದಬಾಯಿಸುತ್ತಿದ್ದಾರೆ. ಮಾಹಿತಿ ಪ್ರಕಾರ, ಮೂರು ದಿನಗಳಿಂದ ಲಂಚು ಯಾರಿಗೂ ಕಾಣ ಸಿಕ್ಕಿಲ್ಲವಂತೆ.
ಕೆಲವು ತಿಂಗಳ ಹಿಂದಷ್ಟೇ ಮೂರನೇ ಸೀಸನ್ ಹೆಸರಲ್ಲಿ ಅಸ್ತ್ರ ಲಕ್ಕಿ ಸ್ಕೀಮ್ ಯೋಜನೆಯನ್ನು ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಲಾಂಚ್ ಮಾಡಿದ್ದು ಅಲ್ಲಿಯೂ ಸಾಕಷ್ಟು ಗ್ರಾಹಕರನ್ನು ಸೆಳೆಯುವ ಕೆಲಸ ಮಾಡಲಾಗಿತ್ತು. ಆದರೆ, ಕಳೆದ ಎಪ್ರಿಲ್ ನಂತರ ಲಂಚುಲಾಲ್ ತನ್ನ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ, ಸ್ವಲ್ಪ ಟೈಮ್ ಬೇಕಾಗುತ್ತೆ ಎಂದು ಹಣ ಕೇಳಲು ಬಂದ ಮಂಗಳೂರಿನ ಕೆಲವು ಏಜಂಟರನ್ನು ನಂಬಿಸುತ್ತ ಬಂದಿದ್ದ. ಹಣ ಕೇಳಿ ಜೋರು ಮಾಡಿದವರಿಗೆ ಮಾತ್ರ ಒಂದಷ್ಟು ಹಣ ನೀಡಲಾಗಿದೆ. ಇದಲ್ಲದೆ, ದೊಡ್ಡ ಮೊತ್ತದ ಹಣ ಸಂಗ್ರಹಿಸುವ ಕುರಿ ಫಂಡ್ ರೀತಿಯಲ್ಲೂ ಈತನ ವ್ಯವಹಾರಗಳಿದ್ದವು.