ಲಾವಣ್ಯ ಮನೆಗೆ ಜನಪ್ರತಿನಿಧಿಗಳ ಭೇಟಿ: ಕುಟುಂಬಕ್ಕೆ ಸಾಂತ್ವನ
ಯುವತಿ ಲಾವಣ್ಯಳ ಹತ್ಯೆಯನ್ನು ಖಂಡಿಸಿದ ನಿಯೋಗ ಈ ಕೃತ್ಯ ಅತ್ಯಂತ ನೋವು ಮತ್ತು ಆಘಾತಕಾರಿ ಘಟನೆಯಾಗಿದೆ. ಪ್ರಕರಣದ ಆರೋಪಿಗೆ ಕಾನೂನಿನಡಿ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರಲ್ಲದೆ ಕುಟುಂಬಕ್ಕೆ ನ್ಯಾಯ ದೊರಕಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಜನಪ್ರತಿನಿಧಿಗಳು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಸರಕಾರ ಹಾಗೂ ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೃತ ಲಾವಣ್ಯ ಅವರ ಆತ್ಮಕ್ಕೆ ಶಾಂತಿ ಕೋರಿ ಶೃದ್ದಾಂಜಲಿ ಅರ್ಪಿಸಿ ಶೋಕತಪ್ತ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ತೀವ್ರ ದು:ಖ ತಂದಿದೆ:
ಶಾಸಕ ನಾಯ್ಕ್ ಮಾತನಾಡಿ, ಘಟನೆಯ ಸಂದರ್ಭದಲ್ಲಿ ನಾನು ಊರಿನಲ್ಲಿಲ್ಲದಿದ್ದು, ಒಡಿಶಾದ ಪುರಿ ಜಗನ್ನಾಥ ದೇವಾಲಯದ ರಥೋತ್ಸವದಲ್ಲಿ ಭಾಗಿಯಾಗಿದ್ದೆ. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಮತ್ತು ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದೇನೆ.
ಈ ಘಟನೆ ನನಗೆ ತೀವ್ರ ದುಃಖ ತಂದಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೃತ ಲಾವಣ್ಯ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಅವರೊಂದಿಗೆ ಸದಾ ನಾವಿರುವುದಾಗಿ ಭರವಸೆ ನೀಡಿದ್ದೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಗಂಭೀರವಾಗಿ ಪರಿಗಣಿಸಬೇಕು:
ನಳಿನ್ ಕುಮಾರ್ ಮಾತನಾಡಿ, ಪ್ರೇಮದ ಹೆಸರಿನಲ್ಲಿ ಅಮಾಯಕ ಯುವತಿಯನ್ನು ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನೀಯವಾಗಿದೆ. ನಾನು ಪ್ರವಾಸದಲ್ಲಿದ್ದ ಕಾರಣ ಘಟನೆಯ ವೇಳೆ ಬರಲು ಸಾಧ್ಯವಾಗಲಿಲ್ಲ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕುಟುಂಬ ಸದಸ್ಯರು ಆಗ್ರಹಿಸಿದ್ದು, ನಾವು ಕೂಡ ಅದೇ ರೀತಿಯ ಕಠಿಣ ಶಿಕ್ಷೆಗೆ ಒತ್ತಾಯಿಸುತ್ತೇವೆ. ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಬೇಸರ ತಂದಿದೆ: ಶಾಸಕಿ ಮುರಳ್ಯ
ಸಹೋದರಿ ಲಾವಣ್ಯ ಅವರ ಹತ್ಯಾ ಘಟನೆ ಅತ್ಯಂತ ನೋವು ಮತ್ತು ಬೇಸರ ತಂದಿದೆ. ಈ ಕೃತ್ಯ ಎಸಗಿದ ಆರೋಪಿಗೆ ಕಾನೂನಿನಡಿ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಮೃತರ ಕುಟುಂಬದ ದುಃಖದಲ್ಲಿ ನಾವು ಭಾಗಿಯಾಗಿದ್ದು, ಅವರೊಂದಿಗೆ ಸದಾ ನಾವಿದ್ದೇವೆ" ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪಕ್ಷದ ಪ್ರಮುಖರಾದ ರಾಮದಾಸ್ ಬಂಟ್ವಾಳ, ಸುರೇಶ್ ಮೈರ, ಚಿದಾನಂದ ಕಕ್ಯ, ವಸಂತ ಉಳಿ, ರಂಜಿತ್ ಮೈರ, ಅಜಿತ್ ಶೆಟ್ಟಿ ಕಾರಿಂಜ, ಸತೀಶ್ ಶೆಟ್ಟಿ ಮದ್ವ, ಯಶವಂತ ಕಜೆಕಾರು, ಶಶಿಕಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.