ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವರ ದಿಡೀರ್ ಭೇಟಿ, ಕಡತಗಳ ಪರಿಶೀಲನೆ
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಹತ್ಯೆಯಾದ ಲಾವಣ್ಯ ಅವರ ಅಂತಿದರ್ಶನ ಪಡೆದ ಬಳಿಕ ನೇರವಾಗಿ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಆಗಮಿಸಿ ರೋಗಿಗಳ ಜತೆಗೆ ಮಾತುಕತೆ ನಡೆಸಿದರು.
ಬಳಿಕ ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳ ಜತೆಗೆ ವರದಿ ಪಡೆದುಕೊಂಡು, ದಿನನಿತ್ಯ ಬರುವ ರೋಗಿಗಳು ಎಷ್ಟು, ಔಷಧಿ ಎಷ್ಟು ಸಂಗ್ರಹವಿದೆ, ಸವಲತ್ತುಗಳು ಏನೆಲ್ಲಾ ಇದೆ ಇತ್ಯಾದಿಗಳ ಬಗ್ಗೆ ಅವರು ಮಾಹಿತಿ ಪಡೆದುಕೊಂಡರು.
ವೈದ್ಯರ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಯಾವುದೇ ಕಾರಣಕ್ಕೂ ರೋಗಿಗಳಿಗೆ ಚಿಕಿತ್ಸೆ ಸಿಗದೆ ಸಮಸ್ಯೆ ಆಗುವುದು ಅಥವಾ ಯಾವುದೇ ವ್ಯವಸ್ಥೆಗಳು ತಾಲೂಕು ಆಸ್ಪತ್ರೆಯಲ್ಲಿ ಇಲ್ಲ ಎಂಬ ಬಗ್ಗೆ ದೂರು ಬಾರದ ಹಾಗೆ ಮುನ್ನೆಚ್ಚರಿಕೆಯನ್ನು ಇಲಾಖಾ ಅಧಿಕಾರಿಗಳು ಗಮನಹರಿಸುವಂತೆ ಅವರು ಇದೇ ವೇಳೆ ಸೂಚಿಸಿದರು.
ಸುಸಜ್ಜಿತ ಆಸ್ಪತ್ರೆಯಾದರೂ ನಿತ್ಯ ಬರುವ ರೋಗಿಗಳ ಸಂಖ್ಯೆ ಕಡಿಮೆ ಆಗಲು ಕಾರಣವೇನು ಹಾಗೂ ಇಲ್ಲಿರುವ ಉತ್ತಮ ಚಿಕಿತ್ಸಾ ವ್ಯವಸ್ಥೆಗಳ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಯಾಕೆ ನಡೆದಿಲ್ಲ? ಎಂದು ಪ್ರಶ್ನಿಸಿದ ಆರೋಗ್ಯ ಸಚಿವರು, ಜನಸಾಮಾನ್ಯರಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.
ಆಸ್ಪತ್ರೆಯ ಕಾರ್ಯ ಚಟುವಟಿಕೆಯನ್ನು ಪರಿಶೀಲಿಸಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು.
ಜನಸ್ನೇಹಿಯಾಗಿ ಅಭಿವೃದ್ಧಿ:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್ ಅವರು ಬಂಟ್ವಾಳ ತಾಲೂಕು ಆಸ್ಪತ್ರೆಯನ್ನು ಇನ್ನೂ ಜನಸ್ನೇಹಿಯಾಗಿ ಅಭಿವೃದ್ಧಿ ಪಡಿಸಬಹುದು ಎನ್ನುವ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಎಲ್ಲರೂ ತಂಡವಾಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಇಲ್ಲಿ 12 ವೈದ್ಯರು, 25 ಡಿ ಗ್ರೂಪ್ ನೌಕರರು, 27 ನರ್ಸ್‌ಗಳಿದ್ದಾರೆ. ಡಯಾಲಿಸಿಸ್ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ತಿಂಗಳಿಗೆ 50 ರಿಂದ 60 ಆರ್ಥೋ ಆಪರೇಷನ್‌ಗಳು ಆಗುತ್ತಿದೆ ಎಂದರು.
ಬಂಟ್ವಾಳ ಮಾತ್ರವಲ್ಲದೆ ಇದರ ಸುತ್ತಮುತ್ತಲಿನ ಗ್ರಾಮಗಳಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸಹಕಾರ ನೀಡಲು ಆರೋಗ್ಯ ಇಲಾಖೆ ಬದ್ದವಾಗಿದೆ. ಈ ದಿನ ಒಂದಷ್ಟು ವಿಚಾರಗಳನ್ನು ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬಂದು ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.
ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದಿನೇಶ್ ಕಾಮತ್ ಹಾಗೂ ಇತರ ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು. ಚಂದ್ರಹಾಸ್ ಆರ್. ಕರ್ಕೇರ, ಬೇಬಿ ಕುಂದರ್, ಅಬ್ದುಲ್ ರಝಾಕ್ ಕುಕ್ಕಾಜೆ, ರಶೀದ್ ವಿಟ್ಲ, ರಿಯಾಜ್ ನರಿಕೊಂಬು, ಸುರೇಶ್ ನಾವೂರು, ಫಯಾಜ್ ಮುಡಿಪು ಮತ್ತಿತರರು ಉಪಸ್ಥಿತರಿದ್ದರು.