ಲಾವಣ್ಯಳ ಬರ್ಬರ ಹತ್ಯೆ: ಬಿಜೆಪಿ ಮಹಿಳಾ ಮೋರ್ಚಾ ಖಂಡನೆ
ಮಂಗಳೂರು: ಬಂಟ್ವಾಳದಲ್ಲಿ ಲಾವಣ್ಯಳ ಬರ್ಬರ ಹತ್ಯೆಯು ಸುಶಿಕ್ಷಿತ ಜಿಲ್ಲೆಯ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿರುವ ಅತ್ಯಂತ ಅಮಾನುಷ ಹಾಗೂ ಖಂಡನೀಯ ಕೃತ್ಯವಾಗಿದೆ.
ಹಾಡುಹಗಲೇ ನಡೆದ ಈ ದುರ್ಘಟನೆಯು ಮಹಿಳೆಯರು ಹಾಗೂ ಯುವತಿಯರ ಸುರಕ್ಷತೆಯ ಬಗ್ಗೆ ಗಂಭೀರ ಆತಂಕವನ್ನು ಮೂಡಿಸಿದೆ. ರಾಜ್ಯ ಸರ್ಕಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರವು ಇನ್ನಷ್ಟು ಜಾಗರೂಕತೆ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
ಕಾನೂನನ್ನು ಕೈಗೆತ್ತಿಕೊಂಡು ಇಂತಹ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗುವ ದುಷ್ಕರ್ಮಿಗಳ ವಿರುದ್ಧ ಯಾವುದೇ ರೀತಿಯ ಮೃದು ಧೋರಣೆ ತೋರದೆ, ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಪ್ರಕರಣದ ಆರೋಪಿಯನ್ನು ತ್ವರಿತವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಶೀಘ್ರ ವಿಚಾರಣೆ ನಡೆಸಿ, ಕಾನೂನುಬದ್ಧವಾಗಿ ಅತ್ಯಂತ ಕಠಿಣ ಶಿಕ್ಷೆಯಾಗುವಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ಮಹಿಳೆಯರ ಸುರಕ್ಷತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಮಂಜುಳ ಅನಿಲ್ ರಾವ್ ಒತ್ತಾಯಿಸಿದ್ದಾರೆ.