ಸಂಸದ ಚೌಟ-ಬಿಜೆಪಿ ಮುಖಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ ಆಗ್ರಹ
ಶನಿವಾರ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಯಾವುದೇ ವಿಚಾರದಲ್ಲಿ ಮೌನವಹಿಸುತ್ತಿದ್ದ ಸಂಸದ ಚೌಟ ಅವರು ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ತೋರಿಸುವ ದೃಷ್ಟಿಯಿಂದ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಅಶೋಕ್ ರೈ ಹಾಗೂ ರಾಜ್ಯದ ಕಾಂಗ್ರೇಸ್ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ. ಹೀಗೆ ಮಾತನಾಡುವ ಮೂಲಕ ಜಿಲ್ಲೆಯ ಬಿಜೆಪಿಯಲ್ಲಿರುವ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕೋಟೆಯನ್ನು ಒಡೆಯುವ ಕೆಲಸಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ಪುತ್ತೂರು ಶಾಸಕರ ನೈಜ ಹಿಂದುತ್ವದ ಮುಂದೆ ಬಿಜೆಪಿಯ ಡೋಂಗಿ ಹಿಂದುತ್ವ ಬಣ್ಣ ಕಳೆದುಕೊಂಡಿದೆ. ಹಾಲಿ ಎಸ್ಪಿಯವರು ಬಂದ ಬಳಿಕ ಬಿಜೆಪಿಯ ಕೋಮು ಮತ್ತು ಗೋವಿನ ರಾಜಕೀಯಕ್ಕೆ ಕಡಿವಾಣ ಬಿದ್ದಿದೆ. ದ್ವೇಷ ಮಾಡುತ್ತಾ ಜಿಲ್ಲೆಯ ಶಾಂತಿ ಕದಡುತ್ತಿದ್ದವರು ಕಾನೂನಿಗೆ ಹೆದರಿ ಬಿಲ ಸೇರಿದ್ದಾರೆ. ಪುತ್ತೂರಿನಲ್ಲಿ ಕ್ರಿಯಾಶೀಲ ಪ್ರತಿಪಕ್ಷವಾಗಿರಬೇಕಿದ್ದ ಬಿಜೆಪಿಗೆ ಪುತ್ತಿಲ ಪರಿವಾರದ ಜತೆ ಪೈಪೋಟಿಯೇ ಹೆಚ್ಚಾಗಿದೆ. ಬಿಜೆಪಿಯಂತೆ ಕಾಂಗ್ರೆಸ್ ನಲ್ಲಿಯೂ ಕೆಲವು ಕೋಮುವಾದಿಗಳಿದ್ದು, ಅವರು ಮುಸ್ಲಿಂ ಯುವಕರು ಗಾಂಜಾ ಸೇದುವವರು ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಆರೋಪಿ ಮುಸ್ಲಿಂ ಆದರೆ ವೈಲೆಂಟ್... ಹಿಂದು ಆದರೆ ಸೈಲೆಂಟ್..:
ಬಿ.ಸಿ ರೋಡಿನಲ್ಲಿ ಅಮಾಯಕ ಯುವತಿಯನ್ನು ಕೊಂದವರ ವಿರುದ್ದ ನಿಮ್ಮ ಹೋರಾಟ ಯಾವಾಗ ಎಂದು ಪ್ರಶ್ನಿಸಿದ ಆಲಿ ಅವರು ಕೇವಲ ಸಾಂತ್ವನ ಹೇಳಿದರೆ ಸಾಕಾ. ರಾಜಕೀಯವಾಗಿ ಲಾಭವಾಗುವ ಸಂದರ್ಭ ಬಂದರೆ ಮಾತ್ರ ನಿಮ್ಮ ಹೋರಾಟ. ದ.ಕ. ಜಿಲ್ಲೆಯಲ್ಲಿ ಕೊಲೆಗಳಾದಾಗ ಸಂಘಪರಿವಾರ ಎರಡು ರೀತಿಯ ದ್ವಿಮುಖ ನೀತಿ ಅವಲಂಬಿಸುತ್ತಿದ್ದಾರೆ. ಆರೋಪಿ ಮುಸ್ಲಿಂ ಆದರೆ ವೈಲೆಂಟ್.. ಒಂದು ವೇಳೆ ಆರೋಪಿ ಹಿಂದುವಾದರೆ ಸೈಲೆಂಟ್. ಇದು ಬಿಜೆಪಿ ಸಂಘಪರಿವಾರದ ಹಿಡನ್ ಅಜೆಂಡಾ ಎಂದು ಅವರು ಹೇಳಿದರು.
ಕಾಂಗ್ರೆಸ್ ಪ್ರಮುಖರಾದ ಶುಕೂರ್ ಹಾಜಿ, ಸುರೇಶ್ ಪೂಜಾರಿ, ಅಮರನಾಥ ಗೌಡ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಿಯಾಜ್ ಪರ್ಲಡ್ಕ ಉಪಸ್ಥಿತರಿದ್ದರು.