ಬಸ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹತ್ಯೆ: ಹಂತಕನ ಗುರುತು ಪತ್ತೆ
ಹಾಡಹಗಲೇ ಎಲ್ಲರ ಕಣ್ಣೆದುರೇ ಯುವತಿಯನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಹತ್ಯಗೈದ ಕೃತ್ಯ ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮತ್ತು ತೀವ್ರ ಆಘಾತವನ್ನುಂಟು ಮಾಡಿದೆ.
ಕೊಲೆಗೀಡಾದ ಯುವತಿಯನ್ನು ಬಂಟ್ವಾಳ ತಾಲೂಕು ಕಕ್ಕಪದವಿನ ಮೈರಾ ಮಹಮ್ಮಾಯಿ ನಿವಾಸಿ ಬಾಳಕೃಷ್ಣ ಗೌಡ ಅವರ ತೃತೀಯ ಪುತ್ರಿ ಲಾವಣ್ಯ (22) ಎಂದು ಗುರುತಿಸಲಾಗಿದೆ. ಇವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಈಕೆ ಇಲ್ಲಿ ನಸ್೯ ಕೆಲಸ ಮಾಡುತ್ತಿದ್ದಾಳೆ.
ನಡೆದಿದ್ದೇನು?
ಲಾವಣ್ಯ ಅವರು ಕಕ್ಕಪದವು ಕಡೆಗೆ ತೆರಳಲೆಂದು ಸಂಜೆ ಬಿ.ಸಿ. ರೋಡಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಬಂದು ಕುಳಿತಿದ್ದರು. ಈ ವೇಳೆ ತನ್ನ ಪಕ್ಕದಲ್ಲೇ ಕುಳಿತಿದ್ದ ಯುವಕನ ಬಗ್ಗೆ ಆತಂಕಗೊಂಡು, ತಕ್ಷಣವೇ ತಮ್ಮ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, ‘ನನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ’ ಎಂದು ಭಯದಿಂದಲೇ ತಿಳಿಸಿದ್ದರು.
ಆತಂಕಗೊಂಡ ಯುವತಿ ತಕ್ಷಣವೇ ಬಸ್‌ನಿಂದ ಕೆಳಗಿಳಿದಿದ್ದಾರೆ. ಆದರೆ, ಅವಳನ್ನೇ ಬೆನ್ನಟ್ಟಿಕೊಂಡು ಬಂದ ದುಷ್ಕರ್ಮಿ, ತಾನು ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಹರಿತವಾದ ಮಾರಕಾಸ್ತ್ರವನ್ನು ಹೊರಗೆಳೆದಿದ್ದಾನೆ. ಇದನ್ನು ಕಂಡು ದಿಕ್ಕೆಟ್ಟ ಯುವತಿ ಪ್ರಾಣಭಯದಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಎಲ್ಲರ ಸಮ್ಮುಖದಲ್ಲೇ ಹಿಂಬದಿಯಿಂದ ಆಕೆಯ ಮೇಲೆ ಮಾರಕ ದಾಳಿ ನಡೆಸಿದ್ದಾನೆ.
ಮಚ್ಚಿನೇಟಿಗೆ ನೆಲಕ್ಕುರುಳಿಬಿದ್ದಿದ್ದು, ಮತ್ತೆ ಆಕೆಯ ತಲೆಭಾಗಕ್ಕೆ ಕೊಚ್ಚಿದ್ದಾನೆ ತೀವ್ರವಾಗಿ ಗಾಯಗೊಂಡ ಯುವತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಆರೋಪಿ ಕೃತ್ಯ ಎಸಗಿದ ತಕ್ಷಣ ಮಚ್ಚನ್ನು ಸ್ಥಳದಲ್ಲೆ ಎಸೆದು ಪರಾರಿಯಾಗಿದ್ದಾನೆ.
ಸ್ಥಳದಲ್ಲಿ ಆತಂಕದ ವಾತಾವರಣ:
ಜನರು ತುಂಬಿದ್ದ ಬಸ್ ನಿಲ್ದಾಣದಲ್ಲೇ ಇಂತಹ ಭೀಕರ ದುಷ್ಕೃತ್ಯ ನಡೆದಿದ್ದರಿಂದ ಕೆಲಕಾಲ ಸಾರ್ವಜನಿಕರಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ
ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್, ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿಯಶುಕುಮಾರ್, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿಯ ಗುರುತು ಪತ್ತೆ:
ಪೊಲೀಸ್ ಅಧಿಕಾರಿಗಳು ತಮ್ಮ ಪ್ರಾಥಮಿಕ ತನಿಖೆಯಲ್ಲಕೃತ್ಯ ನಡೆಸಿದ ಹಂತಕನ ಗುರುತು ಪತ್ತೆ ಹಚ್ಚಿದ್ದು, ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ಚೇತನ್ ಎಂದು ಹೆಸರಿಸಲಾಗಿದೆ.
ಈತನು ಯುವತಿಯ ದೂರದ ಸಂಬಂಧಿ ಹಾಗೂ ಯುವತಿಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎಂದು ಪೊಲೀಸರ್ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹಂತಕ ಚೇತನ್ ಕೃತ್ಯದ ಬಳಿಕ ಪರಾರಿಯಾಗಿರುವ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದು,ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿದೆ. ಹಂತಕ ಚೇತನ್ ಬಸ್ ನಿಲ್ದಾಣದ ಹೊರಭಾಗದಲ್ಲಿ ವಾಹನವನ್ನು ನಿಲುಗಡೆಗೊಳಿಸಿ ಆಕೆಯನ್ನು ಹಿಂಬಾಲಿಸಿ ಬಂದಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ಕೃತ್ಯದ ನಂತರ ಅದೇ ವಾಹನದಲ್ಲಿ ರಾರಿಯಾಗಿರುವ ಗುಮಾನಿ ಇದೆ.
ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವಾರು ಪ್ರಮುಖರು ಆಸ್ಪತ್ರೆಗಾಗಮಿಸಿ ಕುಟುಬಸ್ಥರಿಗೆ ಸಾಂತ್ವನ ಹೇಳಿದರು.ಎಸ್ಪಿಯವರೊಂದಿಗೂ ಘಟನೆಯ ಕುರಿತು ಚರ್ಚಿಸಿ, ಅರೋಪಿಯ ಬಂಧನಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಎಸ್ಪಿ ಹೇಳಿಕೆ:
ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಎಸ್ಪಿ ಡಾ. ಅರುಣ್ ಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಆರೋಪಿಯ ಬಂಧನಕ್ಕೆ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ಆರೋಪಿಯ ಬಂಧನಕ್ಕೆ ಸೂಚನೆ:
ಪುರಿ ಜಗನ್ನಾಥ ರಥೋತ್ಸವದಲ್ಲಿ ಭಾಗಿಯಾಗಿದ್ದರೂ ಘಟನೆಯ ಮಾಹಿತಿ ತಿಳಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಕ್ಷಣ ಸ್ಪಂದಿಸಿ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಂಪೂರ್ಣ ಮಾಹಿತಿ ಪಡೆದುಕೊಂಡರಲ್ಲದೆ, ಪ್ರಕರಣದ ಆರೋಪಿಯನ್ನು ಯಾವುದೇ ವಿಳಂಬವಿಲ್ಲದೆ ಬಂಧಿಸಿ, ಅನ್ವಯವಾಗುವ ಎಲ್ಲಾ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತ ಹಾಗೂ ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪ್ರಕರಣದಲ್ಲಿ ಬಂಧಿತ ಆರೋಪಿಯ ಜೊತೆಗೆ ಇತರ ವ್ಯಕ್ತಿಗಳ ಪಾತ್ರವೂ ಇದ್ದರೆ, ಆ ಕುರಿತು ಸಮಗ್ರ ತನಿಖೆ ನಡೆಸಿ, ಸಾಕ್ಷ್ಯಾಧಾರಗಳ ಸಹಿತ ಸಂಬಂಧಪಟ್ಟ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದ್ದಲ್ಲದೆ ದುರ್ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ನಿಗಾವನ್ನು ಮತ್ತಷ್ಟು ಬಲಪಡಿಸಬೇಕು, ಸಿಸಿಟಿವಿ ನಿಗಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಹಾಗೂ ಮಹಿಳೆಯರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು, ಅಪರಾಧ ಕೃತ್ಯಗಳಿಗೆ ಅವಕಾಶವಿಲ್ಲದ ವಾತಾವರಣ ನಿರ್ಮಾಣವಾಗಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.