ಕಲ್ಲಡ್ಕದಲ್ಲಿ ಲಾವಣ್ಯರ ಅಂತಿಮ ದರ್ಶನ

ಕಲ್ಲಡ್ಕದಲ್ಲಿ ಲಾವಣ್ಯರ ಅಂತಿಮ ದರ್ಶನ


ಬಂಟ್ವಾಳ: ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಕಕ್ಕೆಪದವಿನ ಮೈರಾ ನಿವಾಸಿ ಬಾಳಪ್ಪ ಗೌಡ ಅವರ ಪುತ್ರಿ ಲಾವಣ್ಯ (21) ಎಂಬಾಕೆಯನ್ನು ಸಿನಿಮೀಯಾ ರೀತಿಯಲ್ಲಿ ಸಾರ್ವಜನಿಕರ ಎದುರಲ್ಲೇ ಮಾರಕಾಸ್ತ್ರದಿಂದ ಪೈಶಾಚಿಕವಾಗಿ ಹತ್ಯೆಗೈದ ಘಟನೆಗೆ ಜನರಲ್ಲಿ ಬೆಚ್ಚಿಬೀಳಿಸಿದ್ದು, ಇಂದು ಕಲ್ಲಡ್ಕದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ಮರಣೋತ್ತರ ಪರೀಕ್ಷೆಯ ಬಳಿಕ ಲಾವಣ್ಯ ಅವರ ಮೃತಶರೀರವನ್ನು ಮನೆಗೆ ಸಾಗಿಸುತ್ತಿದ್ದ ವೇಳೆ ಅವರು ಉದ್ಯೋಗ ಮಾಡುತ್ತಿದ್ದ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ ಮುಂಭಾಗದಲ್ಲಿ ವಾಹನ ನಿಲ್ಲಿಸಿ ಸಹದ್ಯೋಗಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಆಸ್ಪತ್ರೆಯ ಸಿಬ್ಬಂದಿ, ಸ್ನೇಹಿತರು ಹಾಗೂ ಸ್ಥಳೀಯರು ಕಣ್ಣೀರಿನ ವಿದಾಯ ಸಲ್ಲಿಸಿದರು.

ಅಲ್ಲಿಂದ ಮೃತದೇಹವನ್ನು ಕಕ್ಕೆಪದವು ಜಂಕ್ಷನ್‌ಗೆ ತರಲಾಗಿದ್ದು, ಅಲ್ಲಿಯೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಕೆಲಕಾಲ ಅವಕಾಶ ಕಲ್ಪಿಸಲಾಯಿತು. ತದ ನಂತರ ಸ್ವಗ್ರಾಮಕ್ಕೆ ಕೊಂಡೊಯ್ಯಲಾಯಿತು. ಲಾವಣ್ಯ ಅವರ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು, ನೆರೆದಿದ್ದ ಬಂಧುಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು.

ಈ ಕೃತ್ಯವೆಸಗಿದ ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು, ಇಂತಹ ಘಟನೆಗಳು ಸಮಾಜದಲ್ಲಿ ಮತ್ತೆ ಮರುಕಳಿಸದಂತೆ ಸರ್ಕಾರ ಹಾಗೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು.

ಬಳಿಕ ಕುಟುಂಬದ ಸದಸ್ಯರು ಹಾಗೂ ಬಂಧುಗಳ ಸಮ್ಮುಖದಲ್ಲಿ ಮನೆಸಮೀಪ ಅವರಿಗೆ ಸೇರಿದ ಸ್ಥಳದಲ್ಲಿ ಲಾವಣ್ಯಳ ಅಂತ್ಯಕ್ರಿಯೆಯ ವಿಧಿವಿಧಾನಗಳು ನೆರವೇರಿಸಲಾಯಿತು.

ಈ ಘಟನೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಪ್ರೀತಿಯ ಹೆಸರಿನಲ್ಲಿ ನಡೆದ ಈ ಬರ್ಬರ ಕೃತ್ಯ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಕುರಿತು ಮತ್ತೆ ಗಂಭೀರ ಚರ್ಚೆಗೂ ಕಾರಣವಾಗಿದೆ. ಲಾವಣ್ಯಳ ಸಾವಿನ ಹಿನ್ನಲೆಯಲ್ಲಿ ಕಕ್ಕೆಪದವು ಪರಿಸರವಿಡೀ ಸ್ಮಶಾನ ಮೌನ ಅವರಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article