ಭವನದ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿಯ ರಚನೆ ಏಕಪಕ್ಷೀಯವಾಗಿರುವುದು ಖಂಡನೀಯ
ಅವರು ಕಾರ್ಕಳ ಡಾ. ಬಿ.ಆರ್. ಅಂಬೇಡ್ಕರ್ ಭವನ ಕಾಬೆಟ್ಟು ಕಾರ್ಕಳ ಇದರ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿ ರಚನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜು.6ರಂದು ಕಾರ್ಕಳ ತಾಲೂಕು ಕಚೇರಿ ಮುಂಭಾಗ ದಲಿತ ಸಂಘಟನೆಗಳ ಒಕ್ಕೂಟ ಕಾರ್ಕಳ ಇದರ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದರು.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರದಿಂದ 2 ಕೋಟಿ ರೂ. ಅನುದಾನ ನೀಡುತ್ತಿದ್ದರು. ಆದರೆ, ನನ್ನ ಮತ್ತು ಅಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರ ಪರಿಶ್ರಮದಿಂದ ಕಾರ್ಕಳದಲ್ಲಿ 6 ಕೋ. ರೂ. ವೆಚ್ಚದಲ್ಲಿ ಭವನ ನಿರ್ಮಾಣವಾಗಿದೆ. ಆದರೆ ಇದೀಗ ಸ್ಥಳೀಯ ಶಾಸಕನಾದ ನನ್ನೊಂದಿಗಾಗಲೀ ಅಥವಾ ಇಲ್ಲಿನ ದಲಿತ ಸಂಘಟನೆಗಳ ಜೊತೆಯಾಗಲಿ ಚರ್ಚಿಸದೆ ಏಕಪಕ್ಷೀಯವಾಗಿ ಸಮಿತಿ ರಚನೆ ಮಾಡಿರುವುದು ಸರಿಯಲ್ಲ. ಆದ್ದರಿಂದ ಸಮಿತಿಯನ್ನು ರದ್ದುಗೊಳಿಸಿ ನ್ಯಾಯಯುತವಾಗಿ ಹೊಸ ಸಮಿತಿ ರಚನೆಯಾಗಬೇಕೆಂಬ ದಲಿತ ಸಂಘಟನೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟು ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಹೊಸ ಸಮಿತಿ ರಚನೆಯಾಗಲಿ:
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುಧಾಕರ್ ದಾನಶಾಲೆ ಮಾತನಾಡಿ, ಕಾರ್ಕಳದ ದಲಿತ ಸಂಘಟನೆಗಳ ಇತಿಹಾಸದಲ್ಲಿ ಈ ರೀತಿಯ ಪ್ರತಿಭಟನೆ ನಡೆದಿಲ್ಲ. ಅಂಬೇಡ್ಕರ್ ಭವನ ನಿರ್ಮಾಣದ ಸಂದರ್ಭ ನಮ್ಮೊಳಗೆ ಇದ್ದ ಒಗ್ಗಟ್ಟು ಈಗ ಇಲ್ಲ. ಅನಧಿಕೃತವಾಗಿ ರಚನೆಯಾಗಿರುವ ಭವನದ ನಿರ್ವಹಣಾ ಸಮಿತಿಯನ್ನು ರದ್ದುಗೊಳಿಸಿ ಹೊಸ ಸಮಿತಿ ರಚಿಸುವಂತೆ ಒತ್ತಾಯಿಸಿದ ಅವರು, ಏ. 27ರಂದು ಸಮಾಜ ಕಲ್ಯಾಣ ಇಲಾಖೆ ನೀಡಿದ ಸಭಾ ಸೂಚನಾ ಪತ್ರದಲ್ಲಿ ಜೂ.4ರಂದು ನಿರ್ವಹಣಾ ಸಮಿತಿ ರಚನೆಯ ಸಭೆ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ, ಈ ಸಭೆಯನ್ನು ರದ್ದುಪಡಿಸಿರುವುದಾಗಿ ಜೂ. 3ರಂದು ತಿಳಿಸಿದ್ದು, ಆ ಬಳಿಕ ಯಾವುದೇ ಸಭೆ ನಡೆಸದೆ ತಾಲೂಕಿನ ಸುಮಾರು 7 ದಲಿತ ಸಂಘಟನೆಗಳ ಗಮನಕ್ಕೆ ತಾರದೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೂರು ಜನ ವ್ಯಕ್ತಿಗಳನ್ನು ಅನಧಿಕೃತವಾಗಿ ಆಯ್ಕೆ ಮಾಡಿದೆ. ಇದಕ್ಕೆ ನಮ್ಮ ಎಲ್ಲಾ ಸಂಘಟನೆಯ ಕಾರ್ಯಕರ್ತರ ಆಕ್ಷೇಪಣೆಯಿದೆ. ಆದ್ದರಿಂದ ಅನಧಿಕೃತವಾಗಿ ಆಯ್ಕೆ ಮಾಡಿರುವ ಮೂರು ಜನ ನಾಮ ನಿರ್ದೇಶಿತ ವ್ಯಕ್ತಿಗಳ ಆಯ್ಕೆಯನ್ನು ವಜಾ ಮಾಡಿ ಪುನಃ ಸಭೆ ನಡೆಸಿ ಎಲ್ಲರ ಒಮ್ಮತದಿಂದ ಮೂರು ಜನ ಹೊಸ ನಾಮನಿರ್ದೇಶಿತ ಆಯ್ಕೆ ಮಾಡಬೇಕೆಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದರೂ ಈ ಬಗ್ಗೆ ಜಿಲ್ಲಾಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡು ಸ್ಪಂದಿಸದೆ ಇದ್ದ ಕಾರಣ ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ:
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹರೀಶ್ ಮುಡಾರು ಮಾತನಾಡಿ, ಬೇರೆ ತಾಲೂಕುಗಳಿಗೆ ಹೋಲಿಸಿದರೆ, ದಲಿತ ಸಂಘಟನೆಗಳ ಹೋರಾಟ, ಶಾಸಕರ ಇಚ್ಚಾಶಕ್ತಿಯಿಂದ ಬಹಳ ಅಚ್ಚುಕಟ್ಟಾದ ಭವನ ಕಾರ್ಕಳದಲ್ಲಿ ನಿರ್ಮಾಣವಾಗಿದೆ. ಆದರೆ ಇದರ ಉದ್ಘಾಟನೆ ಮಾತ್ರ ತರಾತುರಿಯಲ್ಲಿ ನಡೆದಿದೆ. ಮುಖ್ಯಮಂತ್ರಿ ಬರುತ್ತಾರೆಂದು ಉದ್ಘಾಟನೆಯಾಗಬಾರದಿತ್ತು, ಬದಲಾಗಿ ಉದ್ಘಾಟನೆಗಾಗಿ ಮುಖ್ಯಮಂತ್ರಿ ಬರಬೇಕಿತ್ತು ಎಂದ ಅವರು ಭವನ ನಿರ್ವಹಣಾ ಸಮಿತಿ ರಚನೆ ಕದ್ದುಮುಚ್ಚಿ ನಡೆದಿರುವ ಹಿಂದಿನ ಉದ್ದೇಶವಾದರು ಏನು? ಈ ಬಗ್ಗೆ ನಮ್ಮ ವಿವಿಧ ಪಂಗಡದ ನಡುವೆ ಗೊಂದಲ ಉಂಟಾಗಿದೆ. ಆದ್ದರಿಂದ ನಮ್ಮ ಹೋರಾಟ ಸಾಮಾಜಿಕ ನ್ಯಾಯಕ್ಕಾಗಿ. ಅನಧಿಕೃತವಾಗಿ ರಚನೆಗೊಂಡ ಸಮಿತಿಯನ್ನು ರದ್ದುಗೊಳಿಸಿ ಹೊಸ ಸಮಿತಿ ರಚನೆಯಾಗಬೇಕು. ಯಾರನ್ನು ಬೇಕಾದರೂ ನೇಮಿಸಲಿ, ಆದರೆ ಆಯ್ಕೆ ನ್ಯಾಯಯುತವಾಗಿ ಪಾರದರ್ಶಕವಾಗಿ ನಡೆಯಲಿ. ಒಂದು ವೇಳೆ 10 ದಿನದೊಳಗೆ ಸಮಿತಿಯನ್ನು ಬರ್ಕಾಸುಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.
ದಲಿತ ಸಂಘಟನೆಯ ಪ್ರಮುಖರಾದ ತಾ.ಪಂ. ಮಾಜಿ ಅಧ್ಯಕ್ಷ ಸುಂದರ್ ಬಿ., ಶ್ರೀನಿವಾಸ್ ಕಾರ್ಲ, ಪ್ರಸನ್ನ, ಸತೀಶ್ ಇರ್ವತ್ತೂರು ಮಾತನಾಡಿ, ಯಾವುದೇ ಪಕ್ಷ, ಯಾವುದೇ ಸಮುದಾಯ, ಯಾವುದೇ ಪಂಗಡದ ವಿರುದ್ಧ ನಮ್ಮ ಪ್ರತಿಭಟನೆಯಲ್ಲ. ಬದಲಾಗಿ ಸಮಿತಿ ರಚನೆಯಲ್ಲಾದ ಲೋಪದೋಷದ ವಿರುದ್ಧ ಪ್ರತಿಭಟನೆ. ಸಮಿತಿ ಮೂರು ಮಂದಿಗೆ ಸೀಮಿತವಲ್ಲ. ಆದ್ದರಿಂದ ಈಗಿನ ಸಮಿತಿ ವಜಾಗೊಳಿಸಿ, ಸಮರ್ಥ ವ್ಯಕ್ತಿಗಳ ಆಯ್ಕೆಯಾಗಬೇಕು ಎಂದು ಒತ್ತಾಯಿಸಿದರು.
ಕಾರ್ಕಳ ತಾಲೂಕು ತಹಶೀಲ್ದಾರ್ ಅವರಿಗೆ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಉಪತಹಶೀಲ್ದಾರ್ ಮಂಜುನಾಥ ಬಿ. ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಕೋಶಾಧಿಕಾರಿ ಸುರೇಂದ್ರ ಹವಾಲ್ದಾರ್ ಬೆಟ್ಟು, ಸುನಿಲ್, ಸುನಿತಾ, ಅಣ್ಣಿ ಎಂ., ಪ್ರವೀಣ್ ಮುಂಡ್ಲಿ, ಶಂಕರ, ಗೋವರ್ಧನ್, ಕೃಷ್ಣ ಪಳ್ಳಿ, ರತ್ನಾಕರ್ ಪಳ್ಳಿ, ರಮೇಶ್ ಜರಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.