ಅಪ್ರಾಪ್ತ ಬಾಲಕಿಯ ಕೊಲೆಗೆ ಯತ್ನ: ಆರೋಪಿ ಠಾಣೆಗೆ ಶರಣು
ಆರೋಪಿ ಠಾಣೆಗೆ ಶರಣು:
ಮೋಂತಿಮಾರು ಪಡ್ಪು ನಿವಾಸಿ ಜವ್ವಾರ್ (28) ಎಂಬಾತ ಈ ಕೃತ್ಯೆಸಗಿದ್ದು,ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆಂದು ಹೇಳಲಾಗಿದೆ.
ಪಿಯುಸಿ ವಿದ್ಯಾರ್ಥಿನಿಯಾಗಿರುವ ಬಾಲಕಿ ಎಂದಿನಂತೆ ಬೆಳಿಗ್ಗೆ 8.45 ರ ಹೊತ್ತಿಗೆ ಕಾಲೇಜ್ ಗೆ ಹೋಗಲೆಂದು ಮೊಂತಿಮಾರು ಬಸ್ ತಂಗುದಾಣದಲ್ಲಿ ನಿಂತಿದ್ದಾಗ, ಸ್ಥಳಕ್ಕೆ ಬಂದ ಆರೋಪಿ ಜವ್ವಾರ್ ಏಕಾಏಕಿ ಚಾಕುವಿನಿಂದ ಬಾಲಕಿಯ ತಲೆ ಹಾಗೂ ಕೈಗೆ ಹಲ್ಲೆ ಮಾಡಿದ್ದಾನೆ. ಬಾಲಕಿಯ ಬೊಬ್ಬೆ ಕೇಳಿ ಸ್ಥಳೀಯರು ಅಗಮಿಸುತ್ತಿದ್ದಂತೆ ಚಾಕುವನ್ನು ಸ್ಥಳದಲ್ಲೇ ಎಸೆದು ಆರೋಪಿ ಪರಾರಿಯಾಗಿದ್ದಾನೆ.
ಸ್ಥಳೀಯರು ಅದಾಗಲೇ ಆರೋಪಿಯನ್ನು ಗುರುತಿಸಿದ್ದಾರೆ.
ಆರೋಪಿಯ ಹಠಾತ್ ಚಾಕುವಿನ ದಾಳಿಯ ಪರಿಣಾಮ ಆಕೆ ತೀವ್ರವಾಗಿ ಗಾಯಗೊಂಡಿದ್ದಾಳು. ಈ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಸ್ಥಳದಲ್ಲಿ ಒಂದಷ್ಟು ಕಾಲ ಆತಂಕದ ವಾತಾವರಣವು ಸೃಷ್ಠಿಯಾಯಿತು.
ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.ಆರೋಪಿ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಪೊಲೀಸರು ಸ್ಥಳದಿಂದ ವಶಕ್ಕೆ ಪಡೆದಿದ್ದಾರೆ.
ಬಳಿಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಘಟನೆಯ ಕೆಲ ಹೊತ್ತಿನ ಬಳಿಕ ಆರೋಪಿ ಜವ್ವಾರ್ ನೇರ ಗ್ರಾಮಾಂತರ ಪೊಲೀಸ್ ಠಾಣೆಗಾಗಮಿಸಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಕೃತ್ಯದ ಹಿನ್ನಲೆಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ದಾಳಿಯ ಹಿಂದೆ ಭಗ್ನ ಪ್ರೇಮದ ಶಂಕೆ ವ್ಯಕ್ತವಾಗಿದ್ದರೂ, ಅದರ ಕುರಿತು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಸದ್ಯ ವಿವಿಧ ಆಯಾಮದಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

