ಕಾಡು ಹಂದಿಗಳ ಸಾಮೂಹಿಕ ಸಾವು
ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಕಾಡಂಚಿನಲ್ಲಿರುವ ಅನೇಕ ಗ್ರಾಮಗಳಲ್ಲಿ ಕಳೆದ ಕೆಲದಿನಗಳಿಂದ ಕಾಡು ಹಂದಿಗಳು ಸಾಮೂಹಿಕವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗುತ್ತಿವೆ. ಸಾಕಷ್ಟು ಸಂಖ್ಯೆಯಲ್ಲಿ ಹಂದಿಗಳು ಸಾವನ್ನಪ್ಪುತ್ತಿರುವುದು ಕಂಡುಬಂದಿದ್ದು, ಅರಣ್ಯದಂಚಿನ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ.
ನಾಡ ಗ್ರಾಮದ ರಾಮನಗರ, ಕೆಂಬೈಲು, ತೆಂಕಬೈಲು, ಸೇನಾಪುರದ ಶಿವನಗರ, ಆಲೂರು ಗ್ರಾಮದ ಸಸಿಹಿತ್ಲು, ಆಸ್ಪತ್ರೆ ವಠಾರ, ಕಾಳಿಕಾಂಬಾ ನಗರ, ವಂಡ್ಸೆ, ಹಕ್ಲಾಡಿಯ ಕುಂದಬಾರಂದಾಡಿ, ಆಜ್ರಿ, ಚಿತ್ತೂರು, ಇಡೂರು ಕುಂಜ್ಞಾಡಿ, ಕೊಲ್ಲೂರು ಗ್ರಾಮದ ಕಾಡು ಪ್ರದೇಶಗಳಲ್ಲಿ ಈ ರೀತಿ ಕಾಡುಹಂದಿಗಳು ಸರಣಿಯಾಗಿ ಸಾವನ್ನಪ್ಪುತ್ತಿರುವುದು ವರದಿಯಾಗಿದೆ.
ಕರಾವಳಿಯ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಕಾಡುಹಂದಿಗಳನ್ನು ಜನರು ಬೇಟೆಯಾಡಿ ಮಾಂಸಕ್ಕಾಗಿ ಬಳಸುತ್ತಾರೆ. ಈ ಕಾಡುಹಂದಿಗಳು ಕೃಷಿಕರಿಗೆ, ಅದರಲ್ಲೂ ಭತ್ತದ ಕೃಷಿಗಂತೂ ತುಂಬಾ ತೊಂದರೆ ಕೊಡುತ್ತವೆ. ಇಲ್ಲಿನ ಕೃಷಿಕರ ಪಾಲಿಗೆ ಕಾಡುಹಂದಿಗಳು ಸದಾ ತಲೆನೋವು. ಆದರೆ ಈಗ ಅದೇ ಕಾಡುಹಂದಿಗಳು ಈ ರೀತಿಯಾಗಿ ಅಸ್ವಾಭಾವಿಕ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು ರೈತರಲ್ಲೂ ಆತಂಕ ಮೂಡಿಸಿದೆ.