ಗೃಹ ಜ್ಯೋತಿ: ಜು.1 ರಿಂದ ಫಲಾನುಭವಿಗಳ ಪರಿಶೀಲನೆ ಆರಂಭ
ಮಂಗಳೂರು: ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯವು ಜು.1 ರಿಂದ ಆರಂಭವಾಗಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯ ನಡೆಯಲಿದ್ದು, ಮೆಸ್ಕಾಂನ ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿ ಅವರ ಮಾಹಿತಿ ಸಂಗ್ರಹಿಸಿ, ಮೊಬೈಲ್ ಆಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆನ್ನು ಪೂರ್ಣಗೊಳಿಸಲಿದ್ದಾರೆ.
ಪರಿಶೀಲನೆ ವೇಳೆ ಫಲಾನುಭವಿಗಳು, ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ), ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರವನ್ನು ಸಿದ್ದವಾಗಿಟ್ಟುಕೊಳ್ಳುವಂತೆ ಮೆಸ್ಕಾಂ ಮನವಿ ಮಾಡಿದೆ.
ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೆಸ್ಕಾಂ ಸಿಬ್ಬಂದಿಗಳಿಗೆ ಅಗತ್ಯ ಸಹಕಾರ ನೀಡಿ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮೆಸ್ಕಾಂ ಮನವಿ ಮಾಡಿದೆ.