ಒಂಟಿ ಮನೆ ಮೇಲೆರೆಗಿದ ಆವರಣ ಗೋಡೆ: ಸ್ಥಳಾಂತರಗೊಂಡಿದ್ದ ಕುಟುಂಬ ರಕ್ಷಣೆ
ಇದರಿಂದ ಪಕ್ಕದ ಒಂಟಿ ಮನೆಯು ಸಂಪೂರ್ಣ ನೆಲಸಮಗೊಂಡಿದೆ. ಅಪಾಯವನ್ನು ನಿರೀಕ್ಷಿಸಿದ್ದ ಕುಟುಂಬದ ಐದು ಮಂದಿ ಸದಸ್ಯರು ಎರಡು ವಾರಗಳ ಹಿಂದಷ್ಟೆ ಮನೆಯಿಂದ ಸ್ಥಳಾಂತರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಘೋರ ಅನಾಹುತವೊಂದು ತಪ್ಪಿದಂತಾಗಿದೆ.
ಎಸ್ಟೇಟ್‌ನ ಬೃಹತ್ ಆವರಣ ಗೋಡೆಯು ಕುಸಿದು ಬಿದ್ದ ಪರಿಣಾಮ ಕೆರೆಬೈಲ್ ಗುಡ್ಡೆಯ ನಿವಾಸಿ ಕಿಶೋರ್ ಅವರ ಮನೆ ಸಂಪೂರ್ಣ ನೆಲಸಮಗೊಂಡಿದೆ. ಕೆರೆಬೈಲ್‌ನ ಗುಡ್ಡ ಪ್ರದೇಶದ ತುದಿಯಲ್ಲಿ ಡೆಲ್ಟ ಇನ್ಫ್ರಾಲೋಜಿಸ್ಟಿಕ್ಸ್ ವರ್ಲ್ಡ್ ವೈಡ್ ಲಿ. ಕಂಪೆನಿ ಮಾಲಕ ಅಹಮ್ಮದ್ ಮೊಯ್ದಿನ್ ಅವರು ಕಳೆದ ಕೆಲ ವರುಷಗಳ ಹಿಂದೆ ಬೃಹತ್ ಐಷಾರಾಮಿ ಎಸ್ಟೇಟ್ ಅನ್ನು ನಿರ್ಮಿಸಿದ್ದರು.
ಬೃಹತ್ ವಿಸ್ತೀರ್ಣವುಳ್ಳ ಎಸ್ಟೇಟ್ ಸುತ್ತಲೂ ಎತ್ತರದ ಆವರಣದ ಗೋಡೆಯನ್ನು ನಿರ್ಮಿಸಲಾಗಿತ್ತು.ಕಳೆದ ವರುಷ ಸುರಿದ ಭಾರೀ ಮಳೆಗೆ ಎಸ್ಟೇಟ್‌ನ ಆವರಣಗೋಡೆ ಕುಸಿದು ನೆರೆಯ ಕಿಶೋರ್ ಅವರ ಮನೆಯ ಕಡೆಗೆ ವಾಲಿ ನಿಂತಿತ್ತು. ಈ ಬಗ್ಗೆ ಕಿಶೋರ್ ಅವರು ಸ್ಥಳೀಯ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು. ಮುಂಜಾಗೃತ ಕ್ರಮವಾಗಿ ನಗರಸಭೆಯ ಅಧಿಕಾರಿಗಳು ಕಿಶೋರ್ ಅವರ ಕುಟುಂಬ ಸೇರಿದಂತೆ ಎಸ್ಟೇಟ್ ಆವರಣ ಕುಸಿತದ ಭೀತಿಗೊಳಪಟ್ಟ ನೆರೆಯ ಹತ್ತು ಮನೆಗಳ ಕುಟುಂಬಸ್ಥರನ್ನು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು.
ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಎಸ್ಟೇಟ್ ಆವರಣಗೋಡೆಯು ಕುಸಿದು ಕಿಶೋರ್ ಅವರ ಮನೆಯು ಸಂಪೂರ್ಣವಾಗಿ ನೆಲಸಮಗೊಂಡಿದ್ದು, ಘಟನೆಗೆ ಉಳ್ಳಾಲ ನಗರಸಭೆಯ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಯ ಪ್ರಜ್ನೆ ಮೆರೆದ ಕುಟುಂಬ:
ವಾಲಿ ನಿಂತಿದ್ದ ಎಸ್ಟೇಟ್ ಆವರಣ ಗೋಡೆಯಿಂದ ಅಪಾಯ ಎದುರಾಗುವ ಬಗ್ಗೆ ನಿರೀಕ್ಷಿಸಿದ್ದ ಕಿಶೋರ್ ಅವರು ಅಮ್ಮ ಶಕುಂತಳ, ಪತ್ನಿ ಭಾರತಿ ಹಾಗೂ ಇಬ್ಬರು ಮಕ್ಕಳು ಸಮೇತ ಎರಡು ವಾರಗಳ ಹಿಂದಷ್ಟೆ ನಗರದ ಕಾವೂರಿನ ಪತ್ನಿ ಮನೆಗೆ ತೆರಳಿ ಅಲ್ಲೇ ನೆಲೆಸಿದ್ದರು. ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಪರಿಣಾಮ ಸಂಭವನೀಯ ಘೋರ ಅನಾಹುತವೊಂದು ತಪ್ಪಿದಂತಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಶಾಂತ್, ನಗರ ಸಭೆ ಪೌರಾಯುಕ್ತ ಸಂತೋಷ್, ಕಂದಾಯ ನಿರೀಕ್ಷಕ ಪ್ರಮೋದ್, ಗ್ರಾಮಕರಣಿಕ ಅಮ್ಜತ್ ಖಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುರಕ್ಷತ ಸ್ಥಳಕ್ಕೆ ಸ್ಥಳಾಂತರಕ್ಕೆ ಆಗ್ರಹ:
ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಿಶೋರ್ ಅವರು ಮನೆಯನ್ನ ಕಳಕೊಂಡಿದ್ದು, ಅದೃಷ್ಟವಶಾತ್ ಅವರ ಕುಟುಂಬವು ಬದುಕುಳಿದಿದೆ. ಎಸ್ಟೇಟ್ ಆವರಣ ಗೋಡೆಯು ಮತ್ತೆ ಕುಸಿಯುವ ಸ್ಥಿತಿಯಲ್ಲಿದ್ದು ನೆರೆಯಕಾಶಿನಾಥ್, ಮಣಿ, ರಝಾಕ್, ನಝೀರ್, ಅನ್ನು, ರಾಜ ಕೊಟ್ಟಾರಿ, ಸತ್ಯ ಅವರ ಮನೆಗಳೂ ಅಪಾಯದಲ್ಲಿದೆ. ನಗರಸಭೆ ಅಧಿಕಾರಿಗಳು ತಕ್ಷಣವೇ ಮನೆ ಮಂದಿಯನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.