ಕರಾವಳಿಯಲ್ಲಿ ಕಡಿಮೆಯಾಗಲಿದೆ ಭಾರಿ ಮಳೆ: ಮುಂದಿನ 10 ದಿನ ಬಿಟ್ಟು ಬಿಟ್ಟು ಸಾಧಾರಣ ಮಳೆ ನಿರೀಕ್ಷೆ!
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಜಡಿಮಳೆಗೆ ಕೊಂಚ ವಿರಾಮ ಸಿಗುವ ಲಕ್ಷಣಗಳು ಕಂಡುಬರುತ್ತಿವೆ. ಮಂಗಳವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ ಮೂಡಿಬಂದಿತ್ತು. ಆದರೆ ಸಂಜೆ ವೇಳೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತ್ತೆ ಉತ್ತಮ ಮಳೆಯಾದ ವರದಿಯಾಗಿದೆ.
ಹವಾಮಾನ ವರದಿಯ ಪ್ರಕಾರ, ಬುಧವಾರ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ದಿನವಿಡೀ ಬಿಸಿಲು, ಮೋಡ ಮುಸುಕಿದ ವಾತಾವರಣದೊಂದಿಗೆ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಸ್ವಲ್ಪ ತಗ್ಗಲಿದೆ. ಸದ್ಯಕ್ಕೆ ನಿರಂತರವಾಗಿ ಸುರಿಯುವ ಭಾರಿ ಅಥವಾ ಅತಿ ಭಾರಿ ಮಳೆಯ ಮುನ್ಸೂಚನೆಗಳಿಲ್ಲ. ಆದರೆ, ಮುಂಬರುವ 10 ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಮಂಗಳವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 33.8ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಉಳ್ಳಾಲದಲ್ಲಿ 44.2 ಮಿಮಿ ಮಳೆಯಾಗಿದೆ. ಮೂಡುಬಿದಿರೆ 42.2 ಮಿ.ಮೀ, ಕಡಬದಲ್ಲಿ 19.8 ಮಿಮಿ, ಬೆಳ್ತಂಗಡಿ 34.0 ಮಿ.ಮೀ, ಬಂಟ್ವಾಳ 39.7 ಮಿ.ಮೀ, ಪುತ್ತೂರು 27.3 ಮಿ.ಮೀ, ಮಂಗಳೂರಿನಲ್ಲಿ 35.1 ಮಿಮಿ ಮಳೆಯಾಗಿದೆ. ಸುಳ್ಯದಲ್ಲಿ 23.7 ಮಿ.ಮೀ., ಮೂಲ್ಕಿ 33.4 ಮಿ.ಮೀ. ಮಳೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನೇತ್ರಾವತಿ ನದಿ (ಬಂಟ್ವಾಳ) 6.080 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 24.6 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 79.465 ಮೀ, ಗುರುಪುರ ನದಿ (ಅಡ್ಡೂರು) 2.7 ಮೀ ನೀರಿದೆ. ನದಿಗಳ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ನದಿ ತೀರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಚಂಡಮಾರುತದ ಭೀತಿ ಇಲ್ಲ!
ಅರಬ್ಬಿ ಸಮುದ್ರದಲ್ಲಾಗಲಿ ಅಥವಾ ಬಂಗಾಳಕೊಲ್ಲಿಯಲ್ಲಾಗಲಿ ಪ್ರಸ್ತುತ ಮಳೆಯನ್ನು ತೀವ್ರಗೊಳಿಸುವಂತಹ ಯಾವುದೇ ಮಹತ್ವದ ಹವಾಮಾನ ಬದಲಾವಣೆಗಳು ಅಥವಾ ವಾಯುಭಾರ ಕುಸಿತದ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೂ ಸೋಮಾಲಿಯ ಜೆಟ್ ವೇವ್ಸ್ ಪ್ರಭಾವದಿಂದಾಗಿ ಅರಬ್ಬಿ ಸಮುದ್ರದ ಕರಾವಳಿ ಭಾಗದಲ್ಲಿ ಆಗಾಗ ಉತ್ತಮ ಮಳೆಯಾಗುವ ವಾತಾವರಣ ಸೃಷ್ಟಿಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಕರಾವಳಿ ಜನರಿಗೆ ಭಾರಿ ಮಳೆಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದ್ದರೂ, ಜಿಟಿಜಿಟಿ ಮಳೆ ಮುಂದುವರಿಯಲಿದೆ.