24 ಗಂಟೆಯಲ್ಲಿ ಮನೆ ಕಳ್ಳನ ಬಂಧನ: 49 ಗ್ರಾಂ. ಚಿನ್ನಾಭರಣ ವಶಕ್ಕೆ
ಬಂಧಿತನನ್ನು ಮುಲತಃ ಉತ್ತರ ಪ್ರದೇಶದ ಬಲರಾಮ್‌ಪುರ್‌ನ ಗುಮಾರಿಯ ಮುಜಾಹನಿ ಪ್ರದೇಶದ ನಿವಾಸಿ, ಪ್ರಸ್ತುತ ಮಂಗಳೂರಿನ ಬಂದರ್‌ನ ಅಜಿಜುದ್ದೀನ್ ರಸ್ತೆಯ ನಿವಾಸಿ ಜಹೀರುದ್ದೀನ್ (24) ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ:
ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಎಂಬಲ್ಲಿ ಮನೆಯೊಂದರ ಹಿಂಭಾಗದ ಕೊಠಡಿಯ ಛಾವಣಿ ಬದಲಾವಣೆ ಹಾಗೂ ನಂತರ ಹಾಲ್‌ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿಯನ್ನು ಮೇಸ್ತ್ರಿ ಹಾಗೂ ಸಹಾಯಕ ಕೆಲಸದಾರರ ಮೂಲಕ ಜು.6 ರ ವರೆಗೆ ನಡೆಸಿದ್ದು, ಈ ಅವಧಿಯಲ್ಲಿ ಮನೆಯ ಕೋಟೆಯ ಟೇಬಲ್ ಡ್ರಾವರ್‌ನಲ್ಲಿ ಸಣ್ಣ ಪರ್ಸ್‌ನಲ್ಲಿ ಇಟ್ಟುಕೊಂಡಿದ್ದ 20 ಗ್ರಾಂ. ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಉಂಗುರ, 4 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್ ಸೇರಿ ಸುಮಾರು 6,37,000 ರೂ. ಬೆಲೆಯ ಸೊತ್ತುಗಳು ಕಳವು ಮಾಡಿದ್ದ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಕೆಲಸಗಾರರನ್ನು ಕೂಲಂಕುಷವಾಗಿ ವಿಚಾರಿಸಿದಾಗ ಜಹೀರುದ್ದೀನ್ ಚಿನ್ನಾಭರಣ ಹಾಗೂ ವಾಚನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಯಿಂದ ಕಳವಾಗಿದ್ದ ಚಿನ್ನಾಭರಣಗಳನ್ನು ಹಾಗೂ ವಾಚನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಮುಂದಿನ ಕ್ರಮಕ್ಕೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.