ಉದ್ಯೋಗ ಮೇಳ: ‘ಸಮೃದ್ಧಿ ಕೆರಿಯರ್ ನೆಕ್ಸ್ಟ್ 2026’
ಮಂಗಳೂರು: ಶ್ರೀ ವೆಂಕಟೇಶ ಶಿವ ಭಕ್ತಿ ಯೋಗ ಸಂಘದ ಆಡಳಿತದಲ್ಲಿರುವ ಗಾಂಧಿನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ವತಿಯಿಂದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಹಯೋಗದಲ್ಲಿ ಜು.16ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ‘ಸಮೃದ್ಧಿ ಕೆರಿಯರ್ ನೆಕ್ಸ್ಟ್ 2026’ ಆಯೋಜಿಸಲಾಗಿದೆ.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಉಪಕ್ರಮದಡಿಯಲ್ಲಿ ನಡೆಯಲಿರುವ ಈ ಉದ್ಯೋಗ ಮೇಳ ಉದ್ಯೋಗಾಕಾಂಕ್ಷಿಗಳಿಗೆ ಕಾರ್ಪೊರೇಟ್ ಜಗತ್ತಿಗೆ ನೇರ ಪ್ರವೇಶ ಕಲ್ಪಿಸುವ ದಾರಿದೀಪವಾಗಲಿದೆ. ರಾಜ್ಯದ ಪ್ರಮುಖ 35 ರಿಂದ 40 ಪ್ರತಿಷ್ಠಿತ ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಸ್ಥಳದಲ್ಲೇ ಆಯ್ಕೆ ಮಾಡಿಕೊಳ್ಳಲಿವೆ ಎಂದು ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಕ ವಸಂತ ಕಾರಂದೂರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಉದ್ಯೋಗ ಮೇಳದಲ್ಲಿ ಕೇವಲ ಕಾಯಂ ಉದ್ಯೋಗ ಮಾತ್ರವಲ್ಲದೆ, ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ತಕ್ಷಣದ ಆದಾಯದ ನಿರೀಕ್ಷೆಯಲ್ಲಿರುವವರಿಗಾಗಿ ಪೂರ್ಣಾವಽ ಉದ್ಯೋಗ, ಅರೆಕಾಲಿಕ ಉದ್ಯೋಗ ಹಾಗೂ ಇಂಟರ್ನ್‌ಶಿಪ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಐಟಿಐ, ಡಿಪ್ಲೊಮಾ, ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ವಾಣಿಜ್ಯ, ಕಲೆ, ಮ್ಯಾನೇಜ್‌ಮೆಂಟ್ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕರಾವಳಿ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಉದ್ಯೋಗ ಮೇಳಕ್ಕೆ ಯಾವುದೇ ರೀತಿಯ ನೋಂದಣಿ ಶುಲ್ಕ ಇರುವುದಿಲ್ಲ. ಎಲ್ಲಾ ವಿಭಾಗದ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಾಗಿದೆ. ಆಸಕ್ತ ಅಭ್ಯರ್ಥಿಗಳು ಕಾಲೇಜು ಒದಗಿಸಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸಂದರ್ಶನಕ್ಕೆ ಆಗಮಿಸುವ ಉದ್ಯೋಗಾಕಾಂಕ್ಷಿಗಳು ತಮ್ಮ ಅಪ್‌ಡೇಟೆಡ್ ರೆಸ್ಯೂಮ್, ಅಗತ್ಯ ಶೈಕ್ಷಣಿಕ ದಾಖಲಾತಿಗಳ ಪ್ರತಿಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ದೂ. 9900903802 ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ನಾಗೇಶ್ ಕರ್ಕೇರ, ಪ್ರಾಂಶುಪಾಲ ಡಾ. ಜಯಪ್ರಕಾಶ್, ಮಿಥುನ್‌ಚಂದ್ರ ಉಪಸ್ಥಿತರಿದ್ದರು.