ಪರಿಸರದ ಜೊತೆ ಇದ್ದರೆ ಅರೋಗ್ಯ ಸುಧಾರಿಸುತ್ತದೆ: ಯು.ಟಿ. ಖಾದರ್
ಮಂಗಳೂರು: ಪರಿಸರದ ಜೊತೆ ಇದ್ದರೆ ನಮ್ಮ ಅರೋಗ್ಯ ಸುಧಾರಿಸುತ್ತದೆ ಎಂದು ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ, ಬದ್ಧತೆ ಇರಬೇಕು.ಗಿಡ ನೆಟ್ಟ ಮೇಲೆ ಅದನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಿರಬೇಕು. ಈ ಕಾರ್ಯವನ್ನು ಎಕ್ಸ್‌ಪರ್ಟ್ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದೆ. ಇಲ್ಲಿರುವ ಸಸ್ಯ ಪ್ರಭೇದಗಳ ವೈವಿಧ್ಯತೆ ಗಮನಾರ್ಹ ಎಂದವರು ಮೆಚ್ಚುಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಅವರು ಎಕ್ಸ್‌ಪರ್ಟ್ ಫ್ಲೋರಾ ವೆಬ್‌ಸೈಟಿಗೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ತಾವು ನೆಟ್ಟ ಗಿಡಗಳ ಬಗ್ಗೆ ತಿಳಿವಳಿಕೆ ಹೊಂದಿರಬೇಕು ಎಂದು ಮೂಡಬಿದಿರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಹೇಳಿದರು.
ಸಾಕುವ ಹೆತ್ತವರು ಮತ್ತು ದೇಶ ಕಾಯುವ ಸೈನಿಕರಿಗೆ ನಮನ ಸಲ್ಲಿಸುವ ನಾವು, ನಮ್ಮನ್ನು ಪೊರೆಯುವ ಪರಿಸರವನ್ನು ಎಂದಿಗೂ ಮರೆಯಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ಎಕ್ಸ್‌ಪರ್ಟ್‌ನ ಅಭಿವೃದ್ಧಿ ಕಾರ್ಯದಲ್ಲಿ ಪರಿಸರ ಸ್ನೇಹಿ ಕಾಳಜಿ ಇದೆ. ಪ್ರಕೃತಿಯ ಜೊತೆಗೆ ಕಲಿಯುವುದೇ ನಿಜವಾದ ಶಿಕ್ಷಣ. ಶಿಕ್ಷಣ ಪರಿಸರದೊಂದಿಗೆ ಇದ್ದಾಗ ಅರ್ಥಪೂರ್ಣವಾಗುತ್ತದೆ. ಪರಿಸರಕ್ಕೆ ನಾವು ನೀಡುವ ಕೊಡುಗೆ ಮರಳಿ ನಮಗೆ ಸಿಗುತ್ತದೆ ಎಂದು ಹೇಳಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ಎಕ್ಸ್‌ಪರ್ಟ್ ಕ್ಯಾಂಪಸ್‌ನಲ್ಲಿ ಸ್ಥಳೀಯ ತಳಿಗಳಿಗೆ ಪ್ರಾಧಾನ್ಯ ನೀಡಿ ಸಂರಕ್ಷಿಸಲಾಗಿದೆ ಎಂದರು.
ಸಂಸ್ಥೆಯ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ, ಉಪಪ್ರಾಂಶುಪಾಲ(ಶೈಕ್ಷಣಿಕ) ಗುರುದತ್ತ ಎನ್, ಶೈಕ್ಷಣಿಕ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ, ಕ್ಯಾಂಪಸ್ ರೆಸಿಡೆಂಟ್ ಮೆಂಟರ್ ಅನಿತಾ ಪಿ. ಶೆಟ್ಟಿ, ಕಾರ್ಯಕ್ರಮ ನಿರ್ದೇಶಕಿ ಗಾಯತ್ರಿ ಕೆ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪೂರ್ವಿ ಜಿ.ಬಿ. ಸ್ವಾಗತಿಸಿ, ವಂದಿಸಿದರು.