ಆಟೋ ಪ್ರಯಾಣ ದರ: ರೂ.35ರಿಂದ 50ಕ್ಕೆ ಏರಿಸಲು ಒತ್ತಾಯ
ಮಂಗಳೂರು: ಆಟೊರಿಕ್ಷಾ ಎಲ್‌ಪಿಜಿ, ಸಿಎನ್‌ಜಿ ದರ ದುಬಾರಿಯಾಗಿರುವ ಕಾರಣ ಪ್ರಯಾಣದ ಕನಿಷ್ಠ ದರವನ್ನು ಈಗಿನ 35ರಿಂದ 50ಕ್ಕೆ ಏರಿಕೆ ಮಾಡಬೇಕು, ನಂತರದ ಪ್ರತಿ ಕಿ.ಮೀ ದರವನ್ನು 20ರಿಂದ 30ಕ್ಕೆ ಹೆಚ್ಚಳ ಮಾಡಬೇಕು ಹಾಗೂ ಮಂಗಳೂರು ನಗರ ಹಾಗೂ ಗ್ರಾಮಾಂತರ ಆಟೊರಿಕ್ಷಾಗಳಿಗೆ ಪ್ರತ್ಯೇಕ ಕನಿಷ್ಠ ದರ ನಿಗದಿ ಮಾಡಬೇಕು ಎಂದು ಆಟೊರಿಕ್ಷಾ ಸಂಘಟನೆಗಳು ಒತ್ತಾಯಿಸಿವೆ.
ಆಟೊರಿಕ್ಷಾ ದರ ಪರಿಷ್ಕರಣೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಸಾರಿಗೆ ಸಭೆಯಲ್ಲಿ ವಿವಿಧ ಆಟೊರಿಕ್ಷಾ ಸಂಘಟನೆಗಳ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಪರಿಸ್ಥಿತಿಯಿಂದಾಗಿ ಆಟೊರಿಕ್ಷಾ ಎಲ್‌ಪಿಜಿ ದರ ಏರಿಕೆಯಾಗಿದೆ. ಚಾಲಕರು ಸಂಕಷ್ಟದಲ್ಲಿದ್ದು, ಪ್ರಯಾಣದ ಕನಿಷ್ಠ ದರ ಏರಿಕೆ ಅನಿವಾರ್ಯ. ಈವರೆಗೆ 18 ನಿಮಿಷಗಳವರೆಗಿನ ಕಾಯುವಿಕೆಗೆ ಯಾವುದೇ ಶುಲ್ಕ ಇರಲಿಲ್ಲ. ಈ ಸಮಯವನ್ನು 10 ನಿಮಿಷಕ್ಕೆ ಇಳಿಕೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಿಕ್ಷಾ ಚಾಲಕರ ಸಂಘದ ಅರುಣ್ ಕುಮಾರ್ ಒತ್ತಾಯಿಸಿದರು.
ಎಲ್‌ಪಿಜಿ ಅಭಾವ, ದರದಲ್ಲಿ ಹೆಚ್ಚಳ, ಬಿಡಿಭಾಗಗಳ ದರ ಏರಿಕೆ ಎಲ್ಲವನ್ನೂ ಸಹಿಸಿಕೊಂಡು ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದೇವೆ. ಸಮಸ್ಯೆ ಸರಿ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ, ಕನಿಷ್ಠ ಪ್ರಯಾಣ ದರ ಏರಿಕೆಯಿಂದ ಮಾತ್ರ ರಿಕ್ಷಾ ಚಾಲಕರು ಸಂಕಷ್ಟದಿಂದ ಹೊರಬರಲು ಸಾಧ್ಯ’ ಎಂದು ಕರ್ನಾಟಕ ಚಾಲಕರ ಯೂನಿಯನ್ನ ಸಂಚಾಲಕ ಗಣೇಶ್ ಆರ್. ಹೇಳಿದರು.
‘ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಆಟೊರಿಕ್ಷಾಗಳ ಕನಿಷ್ಠ ಪ್ರಯಾಣ ದರ ಏಕರೂಪದಲ್ಲಿತ್ತು. ಗ್ರಾಮಾಂತರ ಭಾಗದ ಕೆಲವರು ಇದನ್ನು ದುರುಪಯೋಗ ಮಾಡಿಕೊಂಡು, ನಗರದಲ್ಲಿ ಬಾಡಿಗೆ ಮಾಡುತ್ತಾರೆ. ಹೀಗಾಗಿ, ದರ ಪರಿಷ್ಕರಣೆಯ ವೇಳೆ ನಗರ ಹಾಗೂ ಗ್ರಾಮಾಂತರದ ಕನಿಷ್ಠ ಪ್ರಯಾಣ ದರ ಪ್ರತ್ಯೇಕವಾಗಿರಬೇಕು. ಇದರಿಂದ ಮೀಟರ್ನಲ್ಲಿ ದರ ಬದಲಾವಣೆ ಮಾಡಲು ಸಾಧ್ಯವಾಗದೆ, ಸೌಲಭ್ಯ ದುರುಪಯೋಗ ತಪ್ಪುತ್ತದೆ’ ಎಂದು ಅನೇಕ ರಿಕ್ಷಾ ಚಾಲಕರು ಸಲಹೆ ನೀಡಿದರು.
ಕೋವಿಡ್ 19ರ ಸಾಂಕ್ರಾಮಿಕದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಚಾಲಕರಿಗೆ ಸರ್ಕಾರ ಆರ್ಥಿಕ ನೆರವು ನೀಡಿದಂತೆ ಈಗಲೂ ನೆರವಿಗೆ ಬರಬೇಕು. ಎಲ್ಪಿಜಿ ದರ ಹೆಚ್ಚಳದ ಬಳಿಕ ಅನೇಕರು ರಿಕ್ಷಾದ ಇಂಧನವನ್ನು ಸಿಎನ್ಜಿಗೆ ಪರಿವರ್ತಿಸಿಕೊಂಡಿದ್ದಾರೆ. ಸಿಎನ್ಜಿ ಬಂಕ್ಗಳ ಸಂಖ್ಯೆ ಹೆಚ್ಚಿಸಬೇಕು. ಕೆಲವು ಬಂಕ್‌ಗಳಲ್ಲಿ ಎಲ್‌ಪಿಜಿ ತುಂಬಿಸಿದಾಗ ಮೈಲೇಜ್ ವ್ಯತ್ಯಾಸ ಬರುತ್ತಿದ್ದು, ಈ ಬಗ್ಗೆ ಪರಿಶೀಲಿಸಬೇಕು. ಆಟೊರಿಕ್ಷಾಗಳನ್ನು ಗುರುತಿಸುವ ವಲಯ ಸಂಖ್ಯೆ ಸ್ಟಿಕರ್ಗಳನ್ನು ರಿಕ್ಷಾದ ನಾಲ್ಕು ಕಡೆಗಳಲ್ಲಿ ಕಡ್ಡಾಯವಾಗಿ ಹಾಕಬೇಕು ಎಂದು ವಿವಿಧ ರಿಕ್ಷಾ ಸಂಘಟನೆಗಳ ಪ್ರಮುಖರು ಒತ್ತಾಯಿಸಿದರು.
‘2022ರ ನಂತರ ಆಟೊರಿಕ್ಷಾ ಪ್ರಯಾಣ ದರ ಏರಿಕೆಯಾಗಿಲ್ಲ. ರಿಕ್ಷಾ ಚಾಲಕರ ಪ್ರಸ್ತುತ ಬೇಡಿಕೆ ನ್ಯಾಯಯುತವಾಗಿದ್ದು, ದರ ಏರಿಕೆ ಮಾಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್ ಟವರ್ಸ್ ಹೇಳಿದರು.
2022ರಲ್ಲಿ ಎಲ್‌ಪಿಜಿ ದರ ಕೆ.ಜಿ.ಗೆ 62.36 ಇತ್ತು, ಈಗ 86.76, ಸಿಎನ್‌ಜಿ 86ರಿಂದ 95, ಪೆಟ್ರೋಲ್ ಲೀಟರ್‌ಗೆ 101ರಿಂದ 110, 112, ಡೀಸೆಲ್ 87.41ರಿಂದ 98.99 ಆಗಿದೆ. ಆಟೊರಿಕ್ಷಾ ಚಾಲಕರು ದರ ಪರಿಷ್ಕರಣೆಗೆ ವಿನಂತಿಸಿ, 2025ರ ಅಕ್ಟೋಬರ್ನಲ್ಲಿ ಮನವಿ ಸಲ್ಲಿಸಿದ್ದರು. ಆಟೊರಿಕ್ಷಾಗಳ ಸಮಸ್ಯೆಗೆ ಸಂಬಂಧಿಸಿ ಕಾಲಕಾಲಕ್ಕೆ ಸಭೆ ನಡೆಸಿ ಸ್ಪಂದಿಸಲಾಗಿದೆ ಎಂದು ರಿಕ್ಷಾ ಯೂನಿಯನ್ ಪದಾಧಿಕಾರಿಗಳ ಅಭಿಪ್ರಾಯ ಆಲಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಹೇಳಿದರು.
‘ಪ್ರಯಾಣಿಕರಿಗೆ ಹೊರೆ’
ರಿಕ್ಷಾದಲ್ಲಿ ಪ್ರಯಾಣಿಸುವವರಲ್ಲಿ ಹೆಚ್ಚಿನವರು ಮಧ್ಯಮ ಹಾಗೂ ಬಡ ವರ್ಗದವರು. ಕನಿಷ್ಠ ಪ್ರಯಾಣ ದರವನ್ನು ಒಮ್ಮೆಲೇ 15ರಷ್ಟು ಹೆಚ್ಚಿಸಿದರೆ ಜನರಿಗೆ ಹೊರೆಯಾಗುತ್ತದೆ. ಇಂಧನ ದರ ಇಳಿಕೆಯಾದರೆ,ಕನಿಷ್ಠ ಪ್ರಯಾಣ ದರವನ್ನು ಪುನಃ ಇಳಿಕೆ ಮಾಡಲು ಆಗುವುದಿಲ್ಲ. ಹೀಗಾಗಿ, ಪ್ರಯಾಣಿಕರ ಹಿತವನ್ನೂ ಗಮನದಲ್ಲಿಟ್ಟು ಕನಿಷ್ಠ ಪ್ರಯಾಣ ದರ ನಿಗದಿಪಡಿಸಬೇಕು ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ ಕಾಮತ್ ಹೇಳಿದರು.
ರಿಕ್ಷಾ ಸಂಘಟನೆಗಳ ಪ್ರಮುಖರಾದ ಮೋಹನ್, ಮಹಮ್ಮದ್ ಅನ್ಸಾರ್, ರೆಹಮಾನ್ ಬೋಳಿಯಾರ್, ವಿಷ್ಣುಮೂರ್ತಿ, ಶೇಖರ್ ದೇರಳಕಟ್ಟೆ, ದೀಪಕ್ ರಾಜ್, ಅಬೂಬಕರ್ ಸುರತ್ಕಲ್, ಅಬ್ದುಲ್ ಜಲೀಲ್, ಆದಿದ್ರಾವಿಡ ಸಂಘಟನೆಯ ವಿಶ್ವನಾಥ್, ಮಜ್ದೂರ್ ಸಂಘದ ಅನಿಲ್ ಕುಮಾರ್ ಮಾತನಾಡಿದರು. ಡಿಸಿಪಿ ರವಿಶಂಕರ್, ಆರ್ಟಿಒ ಮುರುಗೇಂದ್ರ ಶಿರೋಲ್ಕರ್ ಉಪಸ್ಥಿತರಿದ್ದರು.