ಜುಲೈ 5ರಂದು ಕುದ್ಮುಲ್ ರಂಗರಾವ್ ಜಯಂತಿ: ಪ.ಜಾ. ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಹಾಗೂ ರಾಷ್ಟ್ರೀಯ–ರಾಜ್ಯ ಮಟ್ಟದ ನಾಯಕರಿಗೆ ಅಭಿನಂದನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗ)ದ ವತಿಯಿಂದ ಮಹಾನ್ ಸಮಾಜ ಸುಧಾರಕ, ಶಿಕ್ಷಣದ ಹರಿಕಾರ, ದಲಿತೋದ್ಧಾರದ ಮುಂಚೂಣಿ ನಾಯಕ ಹಾಗೂ ಸಾಮಾಜಿಕ ಸಮಾನತೆಯ ಮಹಾನ್ ಚಿಂತಕರಾದ ಕುದ್ಮುಲ್ ರಂಗರಾವ್ ಅವರ ಜಯಂತಿಯನ್ನು ಜು.5 ರಂದು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸವಿತಿಯ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ದಿನೇಶ್ ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಬೆಳಕನ್ನು ಹರಡಿದ ಕುದ್ಮುಲ್ ರಂಗರಾವ್ ಅವರ ಆದರ್ಶಗಳನ್ನು ಸ್ಮರಿಸುತ್ತಾ, ಪರಿಶಿಷ್ಟ ಜಾತಿಯ ಕಾಲೇಜು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಉಚಿತ ಕಾಲೇಜು ಬ್ಯಾಗ್‌ಗಳ ವಿತರಣೆ ನಡೆಯಲಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಗಣ್ಯ ನಾಯಕರಿಗೆ ಅಭಿನಂದನಾ ಸಮಾರಂಭವೂ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯರುಗಳಾದ ಜಕ್ಕಪ್ಪ, ಪಿ.ವಿ. ಮೋಹನ್, ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರು, ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.