ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡಕ್ಕೆ ಶೇ.50 ರಿಯಾಯಿತಿ: 35,160 ಪ್ರಕರಣಗಳು ಮುಕ್ತಾಯ
ಮಂಗಳೂರು: ಕರ್ನಾಟಕ ಸರ್ಕಾರದ ಆದೇಶದಂತೆ ಜೂ.21 ರಿಂದ ಜು.10 ರವರೆಗೆ 2026ರ ಮೇ ತಿಂಗಳವರೆಗೆ, ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿ ಬಾಕಿ ಉಳಿದಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡಲಾಗಿದ್ದು, ಇದರಲ್ಲಿ ದ.ಕ. ಜಿಲ್ಲೆಯಲ್ಲಿ 35,160 ಪ್ರಕರಣಗಳು ಅಂತ್ಯಗೊಂಡಿವೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ಈ ವಿಶೇಷ ಕಾರ್ಯಾಚರಣೆಯ ಅವಧಿಯಲ್ಲಿ ಒಟ್ಟು 35,160 ಬಾಕಿ ಇದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ 92,43,400 ರೂ. ದಂಡದ ಮೊತ್ತವನ್ನು ವಾಹನ ಸವಾರರು/ಚಾಲಕರು ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ ಪೊಲೀಸ್ ಠಾಣೆಗೆ ಬಂದು ಪಾವತಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.
ಇದರ ಪೈಕಿ ಎ-ಐ ಕ್ಯಾಮೆರದ ಮೂಲಕ ಸೆರೆ ಹಿಡಿದ ಪ್ರಕರಣಗಳು 18,792, ಅಧಿಕಾರಿ/ಸಿಬ್ಬಂದಿಯವರು ಕರ್ತವ್ಯದ ಅವಧಿಯಲ್ಲಿ ಕಂಡ ಬಂದ ನಿಯಮ ಉಲ್ಲಂಘನೆಯ ಕುರಿತು ದಾಖಲಾದ ಪ್ರಕರಣಗಳು 16,368 ಆಗಿರುತ್ತವೆ.
ಘೋರ ಅಪಘಾತ-ಗಂಭೀರ ಸಂಚಾರ ನಿಯಮ ಉಲ್ಲಂಘನೆ: 224 ಡಿ.ಎಲ್ ಅಮಾನತ್ತು
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ 2026ನೇ ಸಾಲಿನಲ್ಲಿ ಮಂಗಳೂರು ನಗರ ಪೊಲೀಸ್ ವತಿಯಿಂದ ಘೋರ ಅಪಘಾತ ಪ್ರಕರಣಗಳು ಹಾಗೂ ಕೆಲವು ಗಂಭೀರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 224 ವಾಹನ ಚಾಲಕರ ಚಾಲನಾ ಪರವಾನಗಿ (ಡಿ.ಎಲ್.)ಗಳನ್ನು ವಶಪಡಿಸಿಕೊಂಡು, ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್.ಟಿ.ಒ.) ಕಚೇರಿಗಳಿಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ಕುರಿತು ಶಿಫಾರಸು ಮಾಡಿದ್ದು, ಒಟ್ಟು 137 ಡಿ.ಎಲ್.ಗಳು ಅಮಾನತ್ತಾಗಿದ್ದು, ಉಳಿದವುಗಳು ಅಮಾನತ್ತಿನ ಪ್ರಕ್ರಿಯೆಯಲ್ಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.