ಎನ್ಸಿಇಆರ್ಟಿ 7ನೇ ತರಗತಿ ಇಂಗ್ಲಿಷ್ ಭಾಷಾ ವಿಷಯದಲ್ಲಿ ರಾಣಿ ಅಬ್ಬಕ್ಕ ಕುರಿತ ಪಠ್ಯ ಐತಿಹಾಸಿಕ ಗೌರವಕ್ಕೆ ಅಭಿನಂದನೆ
ಮಂಗಳೂರು: ಕರ್ನಾಟಕದ ವೀರವನಿತೆ, ಸ್ವಾತಂತ್ರ್ಯದ ಪ್ರಥಮ ಹೋರಾಟಗಾರ್ತಿಯರಲ್ಲಿ ಒಬ್ಬರಾದ ರಾಣಿ ಅಬ್ಬಕ್ಕ ಅವರ ಜೀವನಾಧಾರಿತ ಪಾಠವನ್ನು ಎನ್ಸಿಇಆರ್ಟಿ 7ನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿರುವುದು ಇಡೀ ಕನ್ನಡಿಗರಿಗೆ ಹೆಮ್ಮೆಯ ಹಾಗೂ ಸಂತಸದ ವಿಷಯವಾಗಿದೆ.
ಈ ಐತಿಹಾಸಿಕ ನಿರ್ಧಾರವನ್ನು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಹಾಗೂ ಅಖಿಲ ಭಾರತೀಯ ಶೈಕ್ಷಿಕ ಮಹಾಸಂಘ ಹೃತ್ಪೂರ್ವಕವಾಗಿ ಸ್ವಾಗತಿಸಿ, ಎನ್ಸಿಇಆರ್ಟಿ ಹಾಗೂ ಈ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಇಲ್ಲಿಯವರೆಗೆ ತುಳುನಾಡಿನ ಇತಿಹಾಸಕ್ಕೆ ಸೀಮಿತವಾಗಿದ್ದ ರಾಣಿ ಅಬ್ಬಕ್ಕ ಅವರ ಶೌರ್ಯ, ದೇಶಭಕ್ತಿ ಹಾಗೂ ಪರಾಕ್ರಮ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ದೇಶ-ವಿದೇಶದ ವಿದ್ಯಾರ್ಥಿಗಳು ಅಬ್ಬಕ್ಕಳ ಜೀವನ ಹಾಗೂ ಆದರ್ಶಗಳನ್ನು ಅರಿಯುವಂತಹ ಅವಕಾಶ ಈ ಪಠ್ಯ ಸೇರ್ಪಡೆಯಿಂದ ದೊರೆತಿರುವುದು ಐತಿಹಾಸಿಕ ಬೆಳವಣಿಗೆಯಾಗಿದೆ.
ಈ ಸಂದರ್ಭದಲ್ಲಿ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಹಾಗೂ ಅಖಿಲ ಭಾರತೀಯ ಶೈಕ್ಷಿಕ ಮಹಾಸಂಘ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಅಬ್ಬಕ್ಕ ರಾಣಿಯ ಜೀವನ, ಹೋರಾಟ ಮತ್ತು ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಕೈಗೊಂಡಿರುವುದನ್ನು ಸ್ಮರಿಸಬಹುದು. ಅಲ್ಲದೆ, ಅಬ್ಬಕ್ಕ ರಾಣಿಯ ಕುರಿತು ವಿಶೇಷ ಪುಸ್ತಕವೊಂದನ್ನು ಪ್ರಕಟಿಸಿ ಅವರ ಇತಿಹಾಸವನ್ನು ದಾಖಲಿಸುವ ಕಾರ್ಯವನ್ನೂ ಸಂಘಗಳು ಯಶಸ್ವಿಯಾಗಿ ನಿರ್ವಹಿಸಿವೆ.
ರಾಣಿ ಅಬ್ಬಕ್ಕ ಅವರ ಆದರ್ಶ, ದೇಶಪ್ರೇಮ ಹಾಗೂ ಸ್ವಾಭಿಮಾನದ ಸಂದೇಶವು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ. ಅವರ ಜೀವನಗಾಥೆ ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳಿಗೆ ತಲುಪುತ್ತಿರುವುದು ಕನ್ನಡ ನಾಡಿನ ಹಾಗೂ ತುಳುನಾಡಿನ ಗೌರವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮತ್ತು ಅಖಿಲ ಭಾರತೀಯ ಶೈಕ್ಷಿಕ ಮಹಾಸಂಘ ವಿಶ್ವಾಸ ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.