ದ.ಕ. ಜಿಲ್ಲಾ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯ್ಯದ್ ನಾಸಿರ್ ಅಲಿ ಶಿಹಾಬ್ ತಂಙಳ್
ಕೇರಳದ ಹಿರಿಯ ಧಾರ್ಮಿಕ ವಿದ್ವಾಂಸರಾಗಿರುವ ಪಾಣಕ್ಕಾಡ್ ಸೈಯ್ಯದ್ ನಾಸಿರ್ ಅಲಿ ಶಿಹಾಬ್ ತಂಙಳ್ ಕೆಲವು ದಿನಗಳ ಹಿಂದೆಯೇ ದ.ಕ. ಜಿಲ್ಲಾ ಖಾಝಿಯಾಗಿ ಹೊಣೆಗಾರಿಕೆ ವಹಿಸಿಕೊಳ್ಳಲು ಒಪ್ಪಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಇಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರ ಸಮ್ಮುಖದಲ್ಲಿ ಇತರ ಮಸೀದಿಗಳ ಪ್ರಮುಖರ ಜೊತೆ ಸಮಾಲೋಚನೆ ನಡೆಸಿ ಈದ್ಗಾ ಮತ್ತು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞಿ ಅಧಿಕೃತವಾಗಿ ಘೋಷಿಸಿದರು.
ಅಪಾರ ಪಾಂಡಿತ್ಯವನ್ನು ಹೊಂದಿರುವ ಪಾಣಕ್ಕಾಡ್ ಸೈಯ್ಯದ್ ನಾಸಿರ್ ಅಲಿ ಶಿಹಾಬ್ ತಂಙಳ್ ಪ್ರವಾದಿ ಮುಹಮ್ಮದ್ (ಸ) ಅವರ ಕುಟುಂಬ ಪರಂಪರೆಯ ಯಮನಿ ಸಯ್ಯಿದ್ ವಂಶಸ್ಥರು. ಕಲ್ಲಿಕೋಟೆ ಸಹಿತ ದಕ್ಷಿಣ ಕೇರಳದ ಹಲವು ಮಹಲ್ಲುಗಳ ಖಾಝಿಯಾಗಿರುವ ಅವರು ಪ್ರಸಕ್ತ ತಿರೂರ್ಙಾಡಿ ತಾಲೂಕು ಸಮಸ್ತದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈದ್ಗಾ ಮತ್ತು ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ, ಸದಸ್ಯರಾದ ಸಮದ್ ಹಾಜಿ, ಅದ್ದು ಹಾಜಿ, ಅಶ್ರಫ್ ಹಳೆಮನೆ, ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಮೊಯ್ದಿನಬ್ಬ ಹಾಜಿ, ಪ್ರಮುಖರಾದ ಯೆನೆಪೊಯ ಜಾವಿದ್ ಮತ್ತಿತರರು ಪಾಲ್ಗೊಂಡಿದ್ದರು.