ಬಾರ್ ರೆಸ್ಟೋರೆಂಟ್‌ಗೆ ದಾಳಿ: ಕಿಶೋರ ಕಾರ್ಮಿಕ ಪತ್ತೆ
Sunday, July 26, 2026
ಮಂಗಳೂರು: ಕಾರ್ಮಿಕ ಇಲಾಖಾ ಅಧಿಕಾರಿಗಳು, ಪುತ್ತೂರು ಹಾಗೂ ಚೈಲ್ಡ್ ಲೈನ್ ಸಂಯೋಜಕರು ಶುಕ್ರವಾರ ಅನಿರೀಕ್ಷಿತ ತಪಾಸಣೆ ನಡೆಸಿದಾಗ ಉಪ್ಪಿನಂಗಡಿಯಲ್ಲಿರುವ ಕಾರ್ತಿಕ್ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಬಿಹಾರ ಮೂಲದ 15 ವರ್ಷದ ಕಿಶೋರ ಕಾರ್ಮಿಕನನ್ನು ದುಡಿಸಿಕೊಳ್ಳುತ್ತಿದ್ದು ಪತ್ತೆಯಾಗಿದೆ.
ಕ್ಲೀನರ್ ಕೆಲಸಕ್ಕೆ ನೇಮಿಸಿಕೊಂಡಿದ್ದ ಕಿಶೋರ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿ ಇಲ್ಲಿ ಪುನರ್ ವಸತಿಗಾಗಿ ಹಾಜರುಪಡಿಸಲಾಯಿತು.
ಕಾರ್ಯಚರಣೆಯಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ( ಪುತ್ತೂರು ವೃತ್ತ) ವಿರೇಂದ್ರ ಕುಂಬಾರ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಶ್ರೀನಿವಾಸ್, ಚೈಲ್ಡ್ ಹೆಲ್ಪ್‌ಲೈನ್ ಸಂಯೋಜಕ ಗಣೇಶ್ ಪಿ. ಪಾಲ್ಗೊಂಡಿದ್ದರು.
ತಪ್ಪಿತಸ್ಥ ಮಾಲೀಕರ ಮೇಲೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ)ಕಾಯ್ದೆ-1986ರನ್ವಯ ಮೊಕದ್ದಮೆ ಹೂಡುವ ಕ್ರಮ ಪ್ರಗತಿಯಲ್ಲಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರ (ಮಂಗಳೂರು ವಿಭಾಗ) ಪ್ರಕಟನೆ ತಿಳಿಸಿದೆ.