ಯುಕೆ-ಭಾರತ ಮುಕ್ತ ವ್ಯಾಪಾರ ಒಪ್ಪಂದ ಜಾರಿಯಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭ: ಚಂದ್ರು ಅಯ್ಯರ್
44 ಬಿಲಿಯನ್ ಪೌಂಡ್ಸ್ ವ್ಯವಹಾರ: ಕರಾವಳಿಗೂ ಪ್ರಯೋಜನ
ಅವರು ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಭಾರತ-ಯುನೈಟೆಡ್ ಕಿಂಗ್‌ಡಮ್ (ಯುಕೆ) ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದಿಂದಾಗಿ ದೇಶದ ಆಮದು ಮತ್ತು ರಫ್ತು 43 ಬಿಲಿಯನ್ ಪೌಂಡ್ಸ್‌ನಿಂದ 48 ಬಿಲಿಯನ್ ಪೌಂಡ್ಸ್‌ಗೆ ಏರಿಕೆಯಾಗಿದೆ ಎಂದರು.
ಕಳೆದ ಜು. 15ರಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಕೆ ಪ್ರಧಾನಿಯವರು ಲಂಡನ್‌ನಲ್ಲಿ ಮುಕ್ತ ವ್ಯಾಪಾರ ಒಪ್ಪಂದ(ಓಪನ್ ಟ್ರೇಡ್ ಡೀಲ್)ಕ್ಕೆ ಸಹಿ ಮಾಡಿದ್ದರು. ಅನಂತರದಲ್ಲಿ ಆಮದು ಮತ್ತು ರಫ್ತು ವ್ಯವಹಾರದಲ್ಲಿ 5 ಬಿಲಿಯನ್ ಪೌಂಡ್ಸ್ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ 75 ಬಿಲಿಯನ್ ಪೌಂಡ್ಸ್‌ಗೆ ಏರಿಕೆಯಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ಕರಾವಳಿಯ ದ.ಕ. ಮತ್ತು ಉಡುಪಿ ಜಿಲ್ಲೆಗಳ ಕೊಡುಗೆ ಸಾಕಷ್ಟಿದೆ. ಇದಕ್ಕಾಗಿ ತಳಮಟ್ಟದಿಂದ ರೈತರು, ಉದ್ಯಮಿಗಳಿಗೆ ಈ ಬಗ್ಗೆ ಸಮಗ್ರ ಮಾಹಿತಿ ಸಿಗಬೇಕಿದೆ. ಈ ನಿಟ್ಟಿನಲ್ಲಿ ಮಂಗಳೂರಿಗೆ ಭೇಟಿ ನೀಡಿ ಸಂಬಂಧಪಟ್ಟವರು, ಅಧಿಕಾರಿಗಳ ಜತೆ ಹಲವು ಸಭೆಗಳನ್ನು ಮಾಡುತ್ತಿದ್ದೇನೆ ಎಂದರು.
ಭಾರತದ ಕೌಶಲ, ತಂತ್ರಜ್ಞಾನ ಇನ್ನಷ್ಟು ಪ್ರಬಲವಾಗಲಿದೆ. ಡಿಜಿಟಲ್ ಟ್ರೇಡ್, ಫಿನ್‌ಟೆಕ್, ಹಸಿರು ಶಕ್ತಿ, ಮೂಲಸೌಕರ್ಯ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಯುಕೆಯಿಂದ ಭಾರತಕ್ಕೆ ಹೂಡಿಕೆ ಹೆಚ್ಚಾಗಲಿದೆ. ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಯುಕೆಯ ವಿವಿಯವರು ಕರ್ನಾಟಕದಲ್ಲೂ ಶಾಲೆಗಳನ್ನು ತೆರೆಯಲಿದ್ದಾರೆ. ಮುಖ್ಯವಾಗಿ ಯುಕೆ ಉದ್ಯಮಿಗಳು ಹೂಡಿಕೆ ಮಾಡಲು ಎಲ್ಲ ಆಯಾಮಗಳಲ್ಲೂ ಕರ್ನಾಟಕ ಪ್ರಸಕ್ತವಾಗಿದೆ. ಹಾಗಾಗಿ ಇಲ್ಲಿನ ಮುಖ್ಯಮಂತ್ರಿಗಳು, ಸಚಿವ ಎಂ.ಬಿ. ಪಾಟೀಲ್ ಜತೆಯೂ ಮಾತುಕತೆ ನಡೆಸಿದ್ದೇನೆ. ಅವರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ಮಣಿಪಾಲ ಮಾಹೆ ಜತೆ ಮಾತುಕತೆ:
ಆರೋಗ್ಯ ಕ್ಷೇತ್ರದಲ್ಲೂ ಗುಣಮಟ್ಟದ ಸೇವೆಗಾಗಿ ಮಣಿಪಾಲ ಮಾಹೆ ಜತೆ ಮಾತುಕತೆ ನಡೆಸಲಾಗಿದ್ದು, 25 ಸ್ಟಾರ್ಟ್ ಅಪ್‌ಗಳನ್ನು ಗುರುತಿಸಲಾಗಿತ್ತು. ಅವರಲ್ಲಿ 6 ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಿದ್ದೇವೆ. ಅವರು ಯುಕೆಗೆ ತೆರಳಿ ಆರೋಗ್ಯ ಕ್ಷೇತ್ರದಲ್ಲಿ ಭಾರತಕ್ಕೇನು ಬೇಕು? ಯುಕೆಗೇನು ಬೇಕು? ಎನ್ನುವ ಬಗ್ಗೆ ಅಧ್ಯಯನ ನಡೆಸಿ ಬರಲಿದ್ದಾರೆ. ಅವರ ಸಂಪೂರ್ಣ ವೆಚ್ಚವನ್ನು ಬ್ರಿಟಿಷ್ ಡೆಪ್ಯೂಟಿ ಹೈಕಮಿಷನ್ ಭರಿಸಲಿದೆ. ಅನಂತರ ಅನುಷ್ಠಾನದ ಬಗ್ಗೆ ಯೋಜನೆ ರೂಪಿಸಲಾಗುವುದು. ಮುಖ್ಯವಾಗಿ ಅಲ್ಲಿನ ತಂತ್ರಜ್ಞಾನ, ವಿದ್ಯಾರ್ಥಿಗಳು, ತಜ್ಞರು, ಪ್ರೊಫೆಸರ್‌ಗಳ ವಿನಿಮಯ ಕಾರ್ಯ ನಡೆಯಲಿದೆ. ಇದರಿಂದ ಅಲ್ಲಿನವರಿಗೂ, ಇಲ್ಲಿನವರಿಗೆ ಬಹಳ ಪ್ರಯೋಜನವಾಗಲಿದೆ ಎಂದರು.
ರಫ್ತು ಸುಂಕ ರದ್ದು:
ಈ ಒಪ್ಪಂದದಿಂದ ಭಾರತದಿಂದ ಯುಕೆಗೆ ರಫ್ತಾಗುವ ಸರಕುಗಳ ಮೇಲಿದ್ದ ಭಾರಿ ಸುಂಕವನ್ನು ಯುಕೆ ರದ್ದು ಮಾಡಿದೆ. ಹಾಗಾಗಿ ಭಾರದಿಂದ ರಫ್ತಾಗುವ ಶೇ.99 ಉತ್ಪನ್ನಗಳಿಗೆ, ಯುಕೆಯಿಂದ ಭಾರತಕ್ಕೆ ಆಮದಾಗುವ ಶೇ.90 ಉತ್ಪನ್ನಗಳ ಮೇಲೆ ಯಾವುದೇ ಸುಂಕವಿರುವುದಿಲ್ಲ ಎಂದರು.
ದ.ಕ., ಉಡುಪಿಗೂ ಲಾಭ:
ಸುಂಕ ಕಡಿತದಿಂದಾಗಿ ಕರ್ನಾಟಕದ ಪ್ರಮುಖ ಉತ್ಪನ್ನಗಳಾದ ಟೆಕ್ಸ್‌ಟೈಲ್, ಬ್ಯಾಡಗಿ, ಕರಿಮೆಣಸು, ಡೈರಿ ಉತ್ಪನ್ನ, ರೇಷ್ಮೆ, ಕರಕುಶಲ ವಸ್ತು, ಮೈಸೂರು ಸಿಲ್ಕ್, ಗೊಂಬೆ, ಕಾಫಿ, ಏಲಕ್ಕಿ, ಮೊದಲಾದ ಉದ್ದಿಮೆದಾರರಿಗೆ ಪ್ರಯೋಜನ ಸಿಗಲಿದ್ದು, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಉಭಯ ಜಿಲ್ಲೆಯ ಮುಖ್ಯವಾಗಿ ಅಡಕೆ, ಮೀನು, ಗೋಡಂಬಿ, ಮಾವು ಮೊದಲಾದವುಗಳ ರಫ್ತು ಹೆಚ್ಚಾಗಲಿದೆ. ಇದರಿಂದ ಇಲ್ಲಿನ ಉದ್ದಿಮೆದಾರರು, ಬೆಳೆಗಾರರಿಗೆ ಬಹಳಷ್ಟುಪ್ರಯೋಜನವಾಗಲಿದೆ. ಬಂದರು, ವಿಮಾನ ನಿಲ್ದಾಣ ಮೂಲ ಸೌಕರ್ಯವಿರುವ ಕಾರಣ ರಫ್ತು ಪ್ರಮಾಣ ಏರಲಿದೆ. ಕರಾವಳಿ ಪ್ರವಾಸೋದ್ಯಮ ಕ್ಷೇತ್ರವೂ ಪ್ರಗತಿ ಕಾಣಲಿದೆ ಎಂದರು.
ನಾಲ್ಕು ವರ್ಷಗಳ ಹಿಂದೆ ಭಾರತ-ಯುಕೆ ಮಧ್ಯೆ ವಾರಕ್ಕೆ ಕೇವಲ 7 ವಿಮಾನಗಳ ಹಾರಾಟವಿತ್ತು. ಈಗ 34 ವಿಮಾನಗಳು ಹಾರಾಟ ನಡೆಸುತ್ತಿದೆ ಎಂದು ಚಂದ್ರು ಅಯ್ಯರ್ ತಿಳಿಸಿದರು.