ಎಸೆತ ಪ್ರಕರಣಕ್ಕೆ ಕಡಿವಾಣ: ಜೈಲಿನ ಆವರಣ ಗೋಡೆಗೆ ಎತ್ತರದ ತಂತಿ ಬೇಲಿ
ಕಾರಾಗೃಹ ಇಲಾಖೆಯ ರೂ.50 ಲಕ್ಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಟೆಂಡರ್ ಸೇರಿದಂತೆ ವಿವಿಧ ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕಳೆದ ಕೆಲ ದಿನಗಳಿಂದ ಕಾಮಗಾರಿ ಆರಂಭವಾಗಿದೆ. ಪ್ರಸ್ತುತ ಜೈಲಿನ ಸುತ್ತ ಸುಮಾರು 15 ಅಡಿ ಎತ್ತರದ ಕಲ್ಲಿನ ಆವರಣ ಗೋಡೆ ಹಾಗೂ ಅದರ ಮೇಲ್ಭಾಗದಲ್ಲಿ ಸುಮಾರು ಎರಡು ಅಡಿ ತಂತಿ ಬೇಲಿ ಇದೆ. ಆದರೂ ಕೆಲವರು ಹೊರ ರಸ್ತೆಯಲ್ಲಿ ನಿಂತು ಗಾಂಜಾ, ಮೊಬೈಲ್ ಹಾಗೂ ಇತರ ವಸ್ತುಗಳನ್ನು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಕಲ್ಲು ಕಟ್ಟಿ ಜೈಲಿನೊಳಗೆ ಎಸೆಯುತ್ತಿರುವ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ.
ಹೊಸದಾಗಿ ನಿರ್ಮಿಸಲಾಗುತ್ತಿರುವ ತಂತಿ ಬೇಲಿ ಗೋಡೆಯ ಮೇಲಿನಿಂದ ಸುಮಾರು 12 ಅಡಿ ಎತ್ತರಕ್ಕೆ ವಿಸ್ತರಿಸಲಿದ್ದು, ಇದರ ಮೂಲಕ ಯಾವುದೇ ವಸ್ತುವನ್ನು ಒಳಗೆ ಎಸೆಯುವುದು ಬಹುತೇಕ ಅಸಾಧ್ಯವಾಗಲಿದೆ. ಜತೆಗೆ ತಂತಿಯ ಜಾಲರಿಗಳು ಅತಿ ಸಣ್ಣದಾಗಿರುವುದರಿಂದ ಸಣ್ಣ ಕಲ್ಲು ಸಹ ಒಳ ಪ್ರವೇಶಿಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಶರಣ ಬಸಪ್ಪ ತಿಳಿಸಿದ್ದಾರೆ.
ಜೈಲಿನ ಹೊರ ಆವರಣದ ಭದ್ರತೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಸಿಬ್ಬಂದಿಗೆ ವಹಿಸಲಾಗಿದೆ. ಜೈಲಿಗೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ನಡೆಸಿದ ಬಳಿಕವೇ ಒಳಗೆ ಬಿಡಲಾಗುತ್ತಿದೆ. ಅಕ್ರಮವಾಗಿ ಮೊಬೈಲ್, ಮಾದಕ ವಸ್ತುಗಳು ಹಾಗೂ ಇತರ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸಲು ಯತ್ನಿಸಿದ ಹಲವರನ್ನು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಈಗಾಗಲೇ ಪತ್ತೆಹಚ್ಚಿ ಕ್ರಮ ಕೈಗೊಂಡಿದ್ದಾರೆ.
210 ಕೈದಿಗಳ ಸಾಮರ್ಥ್ಯ ಹೊಂದಿರುವ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಜುಲೈ 11ರ ಅಂಕಿಅಂಶಗಳ ಪ್ರಕಾರ 369 ಮಂದಿ ಕೈದಿಗಳು ಇದ್ದಾರೆ. ಸ್ಥಳಾವಕಾಶದ ಕೊರತೆಯಿಂದ 100ಕ್ಕೂ ಹೆಚ್ಚು ಕೈದಿಗಳನ್ನು ಶಿವಮೊಗ್ಗ ಸೇರಿದಂತೆ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಜೈಲಿನಲ್ಲಿರುವ ಕೈದಿಗಳಲ್ಲಿ ಶೇ.50ರಿಂದ 60ರಷ್ಟು ಮಂದಿ ಮಾದಕ ವ್ಯಸನಿಗಳಾಗಿದ್ದು, ಅವರು ವಿವಿಧ ಮಾರ್ಗಗಳ ಮೂಲಕ ಮಾದಕ ವಸ್ತುಗಳನ್ನು ಜೈಲಿನೊಳಗೆ ತರಿಸಿಕೊಳ್ಳಲು ಯತ್ನಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.