ಎಸ್‌ಐಆರ್: ಹಗ್ಗದ ಮೂಲಕ ಹೊಳೆ ದಾಟಿ ಕರ್ತವ್ಯ ನಿಷ್ಠೆ ಮೆರೆದ ಬಿಎಲ್‌ಒ

ಎಸ್‌ಐಆರ್: ಹಗ್ಗದ ಮೂಲಕ ಹೊಳೆ ದಾಟಿ ಕರ್ತವ್ಯ ನಿಷ್ಠೆ ಮೆರೆದ ಬಿಎಲ್‌ಒ


ಮಂಗಳೂರು: ಭಾರತೀಯ ಚುನಾವಣಾ ಆಯೋಗದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ವೇಳೆ ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್‌ಒ)ಯೊಬ್ಬರು ಹಗ್ಗದ ಮೂಲಕ ಹೊಳೆ ದಾಟಿ ಮತದಾರರ ಮನೆಗೆ ತೆರಳಿ ಕರ್ತವ್ಯ ನಿರ್ವಹಿಸಿದ ಘಟನೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಬಾಣೂರು ಪ್ರದೇಶದಲ್ಲಿ ನಡೆದಿದೆ.

ಬಾಣೂರು ಸಮೀಪ ಹೊಳೆಯ ಆಚೆ ಕೇವಲ ಮೂರು ಮನೆಗಳಿದ್ದು, ಅಲ್ಲಿಗೆ ನೇರ ರಸ್ತೆ ಸಂಪರ್ಕ ಇಲ್ಲ. ರಸ್ತೆ ಮಾರ್ಗವಾಗಿ ಅಲ್ಲಿಗೆ ತೆರಳಬೇಕಾದರೆ ಬಾಳುಗೋಡು ಮಾರ್ಗವಾಗಿ ಬಹುದೂರ ಸುತ್ತಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಳಿನೆಲೆಬೈಲು ಸರಕಾರಿ ಶಾಲೆಯ ಶಿಕ್ಷಕರೂ ಆಗಿರುವ ಬಿಎಲ್‌ಒ ಲೋಹಿತ್ ಹಾಗೂ ಬಿಎಲ್‌ಎ ಗುಣವರ್ಧನ ಸ್ಥಳೀಯರು ಬಳಸುವ ಹಗ್ಗದ ವ್ಯವಸ್ಥೆಯ ಮೂಲಕ ಹೊಳೆ ದಾಟಿ ಮತದಾರರನ್ನು ಭೇಟಿ ಮಾಡಿ ಎಸ್‌ಐಆರ್ ಕಾರ್ಯ ಪೂರ್ಣಗೊಳಿಸಿದರು. 

ಅಗತ್ಯ ದಾಖಲೆಗಳು ಹಾಗೂ ಪರಿಕರಗಳನ್ನು ಹೊತ್ತುಕೊಂಡು ಹೊಳೆ ದಾಟಿದ ಅವರು, ಮೂರು ಮನೆಗಳಲ್ಲಿದ್ದ ಮತದಾರರ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ದೃಢೀಕರಿಸಿದರು. ಈ ಮನೆಗಳಲ್ಲಿ ಒಬ್ಬ ಮತದಾರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಹೊಳೆ ದಾಟಿ ಹೊರಬರುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಿಎಲ್‌ಒ ಅವರೇ ಮನೆಗೆ ತೆರಳಿ ಪರಿಶೀಲನೆ ನಡೆಸುವುದು ಅನಿವಾರ್ಯವಾಯಿತು. 

ರಸ್ತೆ ಮಾರ್ಗವಾಗಿ ತೆರಳಿದ್ದರೆ ಹೆಚ್ಚಿನ ಸಮಯ ವ್ಯಯವಾಗುತ್ತಿದ್ದ ಕಾರಣ, ಸಮಯ ಉಳಿತಾಯದ ದೃಷ್ಟಿಯಿಂದ ಹಗ್ಗದ ಮೂಲಕ ಹೊಳೆ ದಾಟುವ ಸಮೀಪದ ಮಾರ್ಗವನ್ನೇ ಆಯ್ಕೆ ಮಾಡಿಕೊಂಡರು. ಬಾಣೂರು ಭಾಗದಲ್ಲಿ ಶಾಶ್ವತ ಸೇತುವೆ ಇಲ್ಲದ ಕಾರಣ ಸ್ಥಳೀಯರು ದೈನಂದಿನ ಸಂಚಾರಕ್ಕೂ ಇದೇ ಮಾರ್ಗವನ್ನು ಬಳಸುತ್ತಿದ್ದಾರೆ. ಮಳೆ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿರಲಿಲ್ಲ. ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಂಡು ಅಧಿಕಾರಿಗಳು ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸಿದರು. 

ಬಿಳಿನೆಲೆಬೈಲು ಸರಕಾರಿ ಶಾಲೆಯ ಶಿಕ್ಷಕರಾಗಿರುವ ಲೋಹಿತ್ ಅವರ ವ್ಯಾಪ್ತಿಯಲ್ಲಿ 793 ಮತದಾರರು ಹಾಗೂ 200ಕ್ಕೂ ಅಧಿಕ ಮನೆಗಳಿದ್ದು, ಕಳೆದ 15 ದಿನಗಳಿಂದ ಬಿಎಲ್‌ಎ ಗುಣವರ್ಧನ ಅವರೊಂದಿಗೆ ಮನೆಮನೆಗೆ ಭೇಟಿ ನೀಡಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article