5.20 ಕೋಟಿ ಮೌಲ್ಯದ ಮಾದಕ ವಸ್ತು ಎಂಡಿಎಂಎ ವಶ: ಇಬ್ಬರ ಸೆರೆ
ಈ ಕುರಿತು ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ರೋಪಿಗಳಿಂದ ವಶಕ್ಕೆ ಪಡೆಯಲಾದ ಎಂಡಿಎಂಎ ಮೌಲ್ಯ 5.20 ಕೋಟಿ ರೂ.ಗಳಾಗಿರುತ್ತದೆ ಎಂದರು. ಬಂಧಿತರನ್ನು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ನಿವಾಸಿ ಮುಹಮ್ಮದ್ ಅಲ್ಫಾಎ (28) ಹಾಗೂ ಉಜಿರೆಯ ಹಳೆಪೇಟೆ ಲಾಯಿಲಾ ವಿವೇಕಾನಂದ ನಗರದ ಮುಹಮ್ಮದ್ ಮುಸ್ತಫಾ (28) ಎಂದು ಗುರುತಿಸಲಾಗಿದೆ ಎಂದರು.
ಡ್ರಗ್ಸ್ ಮುಕ್ತ ಮಂಗಳೂರು ಮಾಡುವ ನಿಟ್ಟಿನಲ್ಲಿ ಪೊಲೀಸರ ನಿರಂತರ ಕಾರ್ಯಾಚರಣೆ ಮುಂದುವರಿದ್ದು, ಇದರ ಭಾಗವಾಗಿ 15 ದಿನಗಳ ಹಿಂದೆ ಅಣ್ಣಪ್ಪ ಸ್ವಾಮಿ ಎಂಬ ಡ್ರಗ್ಸ್ ಪೆಡ್ಲರನ್ನು ಬಂಧಿಸಿ ಆತನಿಂದ 15 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿತ್ತು. ಆತನಿಗೆ ಪೂರೈಕೆ ಮಾಡುತ್ತಿದ್ದ ಜಾಲವನ್ನು ಬೇಧಿಸುವ ನಿಟ್ಟಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ದೆಹಲಿಯಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿಕೊಂಡು ಬೆಂಗಳೂರಿಗೆ ಸಾಗಾಟ ಮಾಡುತ್ತಿರುವಾಗ ಬೆಳ್ತಂಗಡಿ ಮೂಲದ ಈ ಇಬ್ಬರು ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಗೆ ದಾಳಿ ನಡೆಸಿ ಬಂಧಿಸಲಾಗಿದೆ. ಬಂಧಿತರಿಂದ ಎಂಡಿಎಂಎ ಜತೆ ಬ್ಯಾಗ್ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಮುಹಮ್ಮದ್ ಅಲ್ಫಾಝ್ ಎಂಬಾತನ ವಿರುದ್ದ ಈ ಹಿಂದೆ 20024 ರಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಾಗೂ 2026 ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಎಂಡಿಎಂಎ ಮಾರಾಟ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಈ ಮಾದಕ ವಸ್ತು ದಂಧೆ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಈ ನಿಟ್ಟಿನಲ್ಲಿ ಪತ್ತೆ ಕಾರ್ಯ ಮುಂದುವರಿಯಲಿದೆ ಎಂದಿದ್ದಾರೆ.