ಅಂಬೇಡ್ಕರ್ ಓದು ವಿಶಿಷ್ಟ ಕಾರ್ಯಕ್ರಮ

ಅಂಬೇಡ್ಕರ್ ಓದು ವಿಶಿಷ್ಟ ಕಾರ್ಯಕ್ರಮ


ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಗೋಕರ್ಣನಾಥೇಶ್ವರ ಪದವಿ ಪೂರ್ವ ಕಾಲೇಜಿನ  ಸಹಯೋಗದೊಂದಿಗೆ  ಅಂಬೇಡ್ಕರ್ ಓದು ಕಾರ್ಯಕ್ರಮವು  ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಮೋಹನ್ ಎಸ್. ಸಿಂಘೆ ಮಾತನಾಡಿ,  ಅಂಬೇಡ್ಕರ್ ಅವರ ಜೀವನ ಸಾಧನೆಯನ್ನು ವಿವರಿಸಿ ಅವರು ಹೆಚ್ಚಿನ ಸಮಯವನ್ನು ಓದಿನಲ್ಲಿ  ಕಳೆಯುತ್ತಿದ್ದರು. ಪುಸ್ತಕ ಉತ್ತಮ ಸಂಗಾತಿ, ಸಾಧ್ಯವಾದಷ್ಟು ನಾವು ಮೂಲ ಕೃತಿಯನ್ನು ಓದಬೇಕು. ಅಂಬೇಡ್ಕರ್ ಅವರ ಛಲ, ಪರಿಶ್ರಮದಲ್ಲಿ ತೊಡಗಿಸಿಕೊಂಡ ಧೀಮಂತ ವ್ಯಕ್ತಿಯಾಗಿ ಅವರ ಸಾಧನೆಯಿಂದ ಇಂದಿಗೂ ಪ್ರಸ್ತುತವೆನಿಸಿದ್ದಾರೆ. ಸಮಾಜ ನಮ್ಮನ್ನು ದೂರವಿರಿಸಿಕೊಂಡರೆ ಪುಸ್ತಕ ಓದುವುದರಿಂದ ನಾವು ಹತ್ತಿರವಾಗುತ್ತೇವೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಓದು ಎಂಬ ವಿಶಿಷ್ಟ ಕಾರ್ಯಕ್ರಮ ನಿಜವಾಗಲೂ ಶ್ಲಾಘನೀಯ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಮಾತನಾಡಿ, ನಿರಂತರವಾದ ಅಧ್ಯಯನದಿಂದ ಸಮಾಜದ ದೃಷ್ಟಿಕೋನವನ್ನು ನಾವು ಬದಲಾವಣೆ ಮಾಡಬಹುದು. ಸತತ ಅಭ್ಯಾಸದಿಂದ ಅಂಬೇಡ್ಕರ್ ಅವರಿಗೆ ಭಾರತ ಸಂವಿಧಾನವನ್ನು ಬರೆಯಲು ಸಾಧ್ಯವಾಯಿತು ಎಂದರು. ಇಂದಿನ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಮೊಬೈಲ್ನಲ್ಲಿ ಕಳೆಯದೆ ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ  ಸಂಚಾಲಕ ವಸಂತ್ ಕಾರಂದೂರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,  ಅಂಬೇಡ್ಕರ್ ಅವರಿಂದ ನಾವು ಕಲಿಯಬೇಕಾದದ್ದು ತುಂಬಾ ಇದೆ. ಅಂಬೇಡ್ಕರ್, ನಾರಾಯಣಗುರುಗಳು ಮತ್ತು ವಿವೇಕಾನಂದರು ಸಮಾಜ ಸುಧಾರಣೆಯ ನೇತಾರರು ಎಂದರು.

ಗೋಕರ್ಣನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ  ರಘುರಾಜ್ ಕದ್ರಿ ಮಾತನಾಡಿ, ವಿದ್ಯಾರ್ಥಿಗಳಿಗೆ ದೊರೆಯುವ ಎಲ್ಲಾ ಸವಲತ್ತುಗಳು ಅಂಬೇಡ್ಕರ್ ಅವರ ಕೊಡುಗೆಯಾಗಿದೆ. ಅವರ ಜೀವನ ಸಾಧನೆಯ ಪುಸ್ತಕವನ್ನು ಓದಿ ತಿಳಿಯಬೇಕು. ಇದು ಅವರಿಗೆ ಕೊಡುವ ಗೌರವವಾಗಿದೆ  ಎಂದರು. 

ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕರ್ಕೇರ, ವಿದ್ಯಾರ್ಥಿ ಸಂಘದ ನಾಯಕಿ ಜೀವಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಎಂಬ ವಿಷಯ ಕುರಿತು ನಡೆದ  ಪ್ರಬಂಧ ಮತ್ತು ಭಾಷಣ  ಸ್ಪರ್ಧೆಯಲ್ಲಿ ವಿಜೇತರಾದ ಅಕ್ಷಯ್ ಕುಮಾರ್, ಪ್ರತಿಜ್ಞ್ಯ, ದೇವಿಕಾ, ಮಧು, ಜೀವನ್, ದೇವಾನಂದ ಅವರಿಗೆ  ಬಹುಮಾನವನ್ನು ನೀಡಲಾಯಿತು.

ಕನ್ನಡ ಉಪನ್ಯಾಸಕ ವಸಂತ್  ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕಿ ಭಾರತಿ ವಂದಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ವನಿತಾ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article