ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ-ಎನ್‌ಎಸ್‌ಯುಐ ಸಹಿ ಸಂಗ್ರಹ ಅಭಿಯಾನ: ಸುಹಾನ್ ಆಳ್ವ
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಂಟು ವಿಧಾನಸಭಾ ವ್ಯಾಪ್ತಿಯ ಎನ್‌ಎಸ್ಯುಐ ಪದಾಧಿಕಾರಿಗಳ ನೇತೃತ್ವದಲ್ಲಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಪೋಸ್ಟ್ ಕಾರ್ಡ್‌ನಲ್ಲಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ನಡೆಸಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಲಾಗುವುದು. ನೀಟ್ ಅವ್ಯವಹಾರದ ಜವಾಬ್ಧಾರಿ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸುವವರೆಗೆ ಎನ್‌ಎಸ್‌ಯುಐ ವತಿಯಿಂದ ಹೋರಾಟ ಮುಂದುವರಿಯಲಿದೆ. ಆಗಸ್ಟ್ ಮೊದಲ ವಾರದಲ್ಲಿ ಎನ್‌ಎಸ್ಯುಐ ವತಿಯಿಂದ ಸಂಸತ್ ಚಲೋ ಕಾರ್ಯಕ್ರಮ ನಡೆಯಲಿದ್ದು, ದ.ಕ. ಜಿಲ್ಲೆಯ ಪ್ರತಿನಿಧಿಗಳು ಕೂಡಾ ಭಾಗವಹಿಸಲಿದ್ದಾರೆ ಎಂದರು.
ನೀಟ್ ಮಾತ್ರವಲ್ಲದೆ, ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ‘ಚಾತ್ರೋಂ ಕಿ ಗೂಂಜ್’ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಎನ್‌ಎಸ್‌ಐಯು ಮೂಲಕ ನೀಡಲಾದ ಕ್ಯೂಆರ್ ಕೋಡ್ ಮೂಲಕ ತಮ್ಮ ಸಮಸ್ಯೆಗಳನ್ನು ರಾಷ್ಟ್ರ ಹಾಗೂ ರಾಜ್ಯದ ನಾಯಕರ ಜತೆ ಹಂಚಿಕೊಳ್ಳಬಹುದು. ಈ ಅಭಿಯಾನ ಈ ತಿಂಗಳ ಅಂತ್ಯದವರೆಗೆ ನಡೆಯಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಎಂ.ಕಾಂ ರದ್ದು ಮಾಡುತ್ತಿರುವುದಾಗಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಂದ ದೂರು ಬಂದಿದ್ದು, ಈ ಬಗ್ಗೆ ಮಂಗಳೂರು ವಿವಿಯ ಕುಲಪತಿ ಅವರನ್ನು ಭೇಟಿ ಆಗಲು ನಿರ್ಧರಿಸಲಾಗಿದೆ. ಈ ಬಾರಿ ಹಂಪನಕಟ್ಟೆ ಕಾಲೇಜಿನ ಎಂ.ಕಾಂಗೆ ದಾಖಲಾತಿ ಕೋರಿ ೪೦ರಷ್ಟು ಅರ್ಜಿಗಳು ಬಂದಿವೆ ಎನ್ನಲಾಗಿದೆ. ಹೀಗಿರುವಾಗ ಈ ಕೋರ್ಸನ್ನು ರದ್ದು ಮಾಡಬಾರದು.
ವಿವಿ ಕುಲಪತಿಯವರಲ್ಲಿ ಈ ಬಗ್ಗೆ ವಿನಂತಿ ಮಾಡಿಕೊಂಡು ಅದು ಸಾಧ್ಯವಾಗದಿದ್ದರೆ ಮುಂದೆ ರಾಜ್ಯ ಸರಕಾರಕ್ಕೂ ಬೇಡಿಕೆ ಸಲ್ಲಿಸಲಾಗುವುದು. ಬಳಿಕ ಪ್ರತಿಭಟನೆಯ ಹಾದಿ ಹಿಡಿಯಲಿದ್ದೇವೆ ಎಂದರು. ಕೆಲವೊಂದು ಕೋರ್ಸ್ಗಳು ದಾಖಲಾತಿ ಸಂಖ್ಯೆಯ ಕೊರತೆಯ ಕಾರಣದಿಂದ ರದ್ದುಪಡಿಸಲಾಗುತ್ತಿದೆ. ಆದರೆ ಎಂ.ಕಾಂಗೆ ಈ ಬಾರಿ 40 ಅರ್ಜಿಗಳು ಬಂದಿವೆ. ಹಾಗಿದ್ದರೂ ಹಂಪನಕಟ್ಟೆ ಕಾಲೇಜಿನಿಂದ ಅದನ್ನು ರದ್ದುಪಡಿಸಿ ಕೊಣಾಜೆಯ ವಿವಿಗೆ ಆ ಕೋರ್ಸನ್ನು ಸ್ಥಳಾಂತರಿಸುವುದು ಸರಿಯಲ್ಲ. ಈ ಬಗ್ಗೆ ವಿವಿಗೆ ಮನವಿ ಮಾಡಲಿದ್ದೇವೆ ಎಂದರು.
ಹಂಪಕನಕಟ್ಟೆ ಕಾಲೇಜಿಗೆ ಕಾಸರಗೋಡಿನಿಂದ ರೈಲಿನ ಮೂಲಕ ಬಹಳಷ್ಟು ವಿದ್ಯಾರ್ಥಿಗಳು ಬರುತ್ತಾರೆ. ಸುರತ್ಕಲ್, ಮೂಲ್ಕಿ, ಮೂಡಬಿದ್ರೆ ಭಾಗದ ವಿದ್ಯಾರ್ಥಿಗಳಿಗೂ ಹಂಪನಕಟ್ಟೆ ಕಾಲೇಜು ಸಮೀಪವಾಗುತ್ತಿದ್ದು ಯಾವುದೇ ಕಾರಣಕ್ಕೂ ಹಂಪನಕಟ್ಟೆಯಲ್ಲಿ ಎಂ.ಕಾಂ ತರಗತಿಯನ್ನು ರದ್ದು ಪಡಿಸಬಾರದು ಎಂಬುದು ನಮ್ಮ ಆಗ್ರಹ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎನ್‌ಎಸ್‌ಯುಐ ಮುಖಂಡರಾದ ಸಾಹಿಲ್ ಮಂಚಿಲ, ಅರ್ಶನ್ ಪೂಜಾರಿ, ಮೂಹಿನ್ ಕೆಂಪಿ, ಧನುಷ್ ಕುಕ್ಕೆತಿ ಸುಳ್ಯ, ಕ್ರಿಸ್ಟಿನ್ ಮಿನೇಜಸ್, ಸಂತೋಷ್ ಸುಳ್ಯ, ಸುಜನ್ ಪೂಜಾರಿ, ಝನೂನ್ ಉಪಸ್ಥಿತರಿದ್ದರು.