ಬಜಾಲ್ ಜಯನಗರ ಜಲ್ಲಿಗುಡ್ಡೆಯಲ್ಲೂ ಕುಸಿದ ಮನೆ ಗೋಡೆ, ಬಿರುಕು ಬಿದ್ದ ಮನೆ ಬೀಳುವ ಮೊದಲೇ ಜಿಲ್ಲಾಡಳಿತ ಎಚ್ಚರಗೊಳ್ಳಲಿ: ಡಿವೈಎಫ್‌ಐ
Wednesday, July 1, 2026
ಮಂಗಳೂರು: ಎರಡು ದಿನದಿಂದ ವಿಪರೀತವಾಗಿ ಸುರಿದ ಧಾರಾಕಾರ ಮಳೆಗೆ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಜಯನಗರ ಎಂಬಲ್ಲಿ ಮಂಗಳವಾರ ಜಯಪ್ರಕಾಶ್ ಎಂಬವರ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಅಲ್ಲೇ ಹತ್ತಿರದ ಸರಸ್ವತಿ ಎಂಬವರ ಮನೆ ಬಿರುಕು ಬಿದ್ದು ಕುಸಿಯುವ ಹಂತದಲ್ಲಿದೆ. ಬುಧವಾರ ಸ್ಥಳೀಯ ಡಿವೈಎಫ್‌ಐ ಬಜಾಲ್ ಘಟಕದ ನಿಯೋಗದ ಜೊತೆ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ತೊಂದರೆಗೊಳಗಾದ ಸ್ಥಳವನ್ನು ಪರಿಶೀಲಿಸಲಾಯಿತು. ಕೂಡಲೇ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವ ಕೆಲಸವನ್ನು ಮಾಡಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯು ಜಲ್ಲಿಗುಡ್ಡೆ ಜಯನಗರದ ಕೆಳಭಾಗದ ರತ್ನಕ್ಕ ಎಂಬವರ ಮನೆಯಿಂದ ಜಯಪ್ರಕಾಶ್, ಸೀತಕ್ಕನ ಮನೆಯವರೆಗೆ ರಸ್ತೆ ಕಾಮಗಾರಿ ಮತ್ತು ಅಲ್ಲೇ ರಿಟರ್ನಿಂಗ್ ವಾಲ್ ತಡೆಗೋಡೆ ಕಟ್ಟುವ ಕಾಮಗಾರಿ ವೇಳೆ ಈ ಕಿರಿದಾದ ರಸ್ತೆ ಅಗಲೀಕರಣ ಕೆಲಸ ಕೈಗೊಂಡಿದ್ದರೂ ರಸ್ತೆ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಮಣ್ಣಿನ ಗೋಡೆಯಿಂದ ಕಟ್ಟಿರುವ ಮನೆಯ ಅಡಿಪಾಯ ಗಟ್ಟಿ ಇರದ ಕಾರಣಕ್ಕೆ ಬಿದ್ದಿರುವ ಮಳೆಗೆ ಅಲ್ಲಿನ ಮಣ್ಣೆಲ್ಲ ಕೊಚ್ಚಿ ಹೋದ ಪರಿಣಾಮ ಮನೆಯ ಗೋಡಿ ಕುಸಿದಿದೆ. ಅದೇ ರೀತಿ ಅಲ್ಲಿನ ಸರಸ್ವತಿ ಎಂಬವರ ಮನೆಗೆ ತಾಗಿಯೇ ತಡೆಗೋಡೆ ನಿರ್ಮಿಸಿ ಮನೆ ಮತ್ತು ಗೋಡೆ ನಡುವೆ ಸೃಷ್ಟಿಯಾಗಿರುವ ಕಂದರಕ್ಕೆ ಮಣ್ಣು ತುಂಬಿಸದೆ ಇರುವ ಕಾರಣಕ್ಕೆ ಆ ಕುಟುಂಬದ ಮನೆ ಗೋಡೆಯು ಬಿರುಕು ಬಿದ್ದು ಕುಸಿಯುವ ಹಂತದಲ್ಲಿದೆ. ಜಯಪ್ರಕಾಶ್ ಮನೆಗೋಡೆ ಕುಸಿದ ಪರಿಣಾಮ ಸಂತ್ರಸ್ತ ಕುಟುಂಬಕ್ಕೆ ಅಪಾರ ನಷ್ಟ ಉಂಟಾಗಿದೆ. ಅದೇ ರೀತಿ ಸರಸ್ವತಿ ಮನೆಯು ಅತ್ಯಂತ ಅಪಾಯ ಪರಿಸ್ಥಿತಿಯಲ್ಲಿದ್ದು ಜೀವಹಾನಿ ಮತ್ತು ಅಪಾರ ನಷ್ಟ ಉಂಟಾಗುವ ಸನ್ನಿವೇಶ ಸೃಷ್ಟಿಯಾಗಿದೆ.
ಈ ಕೂಡಲೇ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಮಳೆಗಾಲದ ಸಹಾಯವಾಣಿ ಪಡೆ ಹಾಗೂ ಎನ್.ಡಿ.ಆರ್.ಎಫ್. ಈ ಪ್ರದೇಶಕ್ಕೆ ಭೇಟಿ ನೀಡಬೇಕು. ಸಂತ್ರಸ್ತರಿಗೆ ಮನೆ ರಿಪೇರಿ ಸಹಿತ ಸೂಕ್ತ ಕ್ರಮ ಹಾಗೂ ನಷ್ಟ ಪರಿಹಾರ ಕ್ರಮಕ್ಕೆ ಮುಂದಾಗಬೇಕೆಂದು ಇಲಾಖೆಯ ಗಮನಕ್ಕೆ ತಂದು ಒತ್ತಾಯಿಸಲಾಯಿತು.
ಡಿವೈಎಫ್‌ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸ್ಥಳೀಯ ಮುಖಂಡರಾದ ದೀಪಕ್ ಬಜಾಲ್, ಯಶ್ ರಾಜ್, ವರಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.








