ನಾಗೋರಿ ದುರಂತ: ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಐದು ಲಕ್ಷ ಪರಿಹಾರ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಅವರು ಆರೋಗ್ಯ ಇಲಾಖೆ ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದರು. ಈ ಘಟನೆಯ ಮಾಹಿತಿ ತಿಳಿದ ಕೂಡಲೇ ದೆಹಲಿ ಭೇಟಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬುಧವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಜಿಲ್ಲಾಡಳಿತ ಕೈಗೊಂಡ ರಕ್ಷಣಾ ಕಾರ್ಯ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಘಟನೆಯಲ್ಲಿ ಬಿಹಾರ ಮೂಲದ ಇಬ್ಬರು ಮಕ್ಕಳು ಹಾಗೂ ಉಡುಪಿ ಮೂಲದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಮೊತ್ತವನ್ನು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಕೂಡಲೇ ಪಾವತಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಗಾಯಗೊಂಡವರಿಗೆ ಸರ್ಕಾರದ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡುವಂತೆಯೂ ಸೂಚಿಸಿದರು.
ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪ ಹೇಗೆ, ಎಲ್ಲಿ ಸಂಭವಿಸುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಘಟನೆ ನಡೆದ ಕೂಡಲೇ ಪೊಲೀಸರು, ಸ್ಥಳೀಯರು ಕಾರ್ಯಾಚರಣೆ ಮಾಡಿದ್ದಾರೆ. ಬದುಕಿ ಉಳಿದವರಿಗೆ ಜಿಲ್ಲಾಡಳಿತ ಮೂಲಕ ಉಚಿತವಾಗಿ ಉತ್ತಮ ಚಿಕಿತ್ಸೆ ನೀಡುತ್ತೇವೆ. ಅಗಲಿದವರು ಬೇರೆ ರಾಜ್ಯದವರಾದರೂ ಪ್ರಾಣ ಮುಖ್ಯ, ಅವರಿಗೂ ಪರಿಹಾರ ಒದಗಿಸಲಾಗಿದೆ ಎಂದರು.
ಇದೊಂದು ಮಳೆ ಆರಂಭದಲ್ಲೇ ಎಚ್ಚರಿಕೆ ಗಂಟೆ, ಅಧಿಕಾರಿಗಳು ಡೇಂಜರ್ ಸ್ಪಾಟ್ ಸಮೀಕ್ಷೆ ಮಾಡಿದ್ದಾರೆ. ಆದರೂ ಜನರೇ ಸ್ವಯಂ ಪ್ರೇರಿತರಾಗಿ ಸೂಕ್ಷ್ಮ ಪ್ರದೇಶಗಳಿಂದ ದೂರ ಹೋಗಬೇಕು. ಸರ್ಕಾರಿ ವ್ಯಾಪ್ತಿಗೆ ಸೇರುವ ಡೇಂಜರ್ ಸ್ಪಾಟ್ ಆಗಿದ್ದಲ್ಲಿ ಸರ್ಕಾರಕ್ಕೆ ಮನವಿ ಕೊಡಲಿ. ಸಾರ್ವಜನಿಕ ಜಾಗಗಳಲ್ಲಿ ಜಿಲ್ಲಾಡಳಿತ ಮಾನಿಟರ್ ಮಾಡುತ್ತದೆ. ಈ ಮನೆಯ ಮಾಲೀಕರಿಗೆ ಅನುದಾನ ಕೊಡುತ್ತೇವೆ. ಅವರು ತಕ್ಷಣ ಮನೆ ದುರಸ್ತಿ ಮಾಡಬೇಕು. ಆ ಬಳಿಕ ಮತ್ತೆ ಇದೇ ನಿರಾಶ್ರಿತರಿಗೆ ಆ ಮನೆ ಬಾಡಿಗೆಗೆ ಕೊಡಬೇಕು. ಮಂಗಳೂರಿನಲ್ಲಿ ಭೂ ಕುಸಿತ ಆಗಿರುವುದು ಇಡೀ ಕರಾವಳಿಗೆ ಸಂದೇಶವಾಗಿದೆ. ಅಧಿಕಾರಿಗಳ ಜೊತೆಯಲ್ಲಿ ಜನಸಾಮಾನ್ಯರು ಕೂಡ ಎಚ್ಚರಿಕೆ ವಹಿಸಬೇಕು. ಯಾವುದಾದರೂ ಬದಲಾವಣೆ ಇದ್ದಲ್ಲಿ ಸರ್ಕಾರದ ಗಮನಕ್ಕೆ ತರಬೇಕು. ಜನಸಾಮಾನ್ಯರಿಗೆ ಯಾರಿಂದಲೂ ತೊಂದರೆ ಆಗಬಾರದು. ಖಾಸಗಿಯವರಿಂದ ಯಾರಿಗಾದರೂ ತೊಂದರೆಯಾದರೆ ಖಾಸಗಿಯವರೇ ಹೊಣೆಯಾಗುತ್ತಾರೆ. ಈ ಕುರಿತು ಕಂದಾಯ ಸಚಿವರು ಕೂಡ ಮಾತನಾಡಿದ್ದಾರೆ ಎಂದರು.