ಸಾರ್ವಜನಿಕ ಆರೋಗ್ಯದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಿ: ಸಿಪಿಐ(ಎಂ) ಬೋಳಾರ ಶಾಖೆಯಿಂದ ಮಾನವ ಸರಪಳಿ

ಸಾರ್ವಜನಿಕ ಆರೋಗ್ಯದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಿ: ಸಿಪಿಐ(ಎಂ) ಬೋಳಾರ ಶಾಖೆಯಿಂದ ಮಾನವ ಸರಪಳಿ


ಮಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ಅನುಸರಿಸುತ್ತಿರುವ ಖಾಸಗೀಕರಣ ನೀತಿಗಳು ಜನರ ಆರೋಗ್ಯ ಹಕ್ಕಿನ ಮೇಲಿನ ನೇರ ದಾಳಿಯಾಗಿದ್ದು, ಜನರ ತೆರಿಗೆ ಹಣದಿಂದ ನಿರ್ಮಾಣ ಗೊಂಡಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕಾರ್ಪೊರೇಟ್ ಲಾಭಕ್ಕಾಗಿ ದುರ್ಬಲಗೊಳಿಸುವ ಪ್ರಯತ್ನಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೋಳಾರ ಶಾಖೆಯ ನೇತೃತ್ವದಲ್ಲಿ ಮಂಗಳಾದೇವಿಯ ನಗರ ಆರೋಗ್ಯ ಕೇಂದ್ರದ ಎದುರು ಜು.19 ರಂದು ನಡೆದ ಮಾನವ ಸರಪಳಿ ಕಾರ್ಕ್ರಮ ಮತ್ತು  ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಸುನಿಲ್ ಕುಮಾರ್ ಬಜಾಲ್, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಸೇವೆಗಳನ್ನು ಮಾರುಕಟ್ಟೆಯ ವಸ್ತುವಾಗಿ ಪರಿವರ್ತಿಸುವ ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮವನ್ನು ದೇಶದ ಜನತೆ ಇಂದು ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಸರ್ಕಾರಗಳು ಸಾರ್ವಜನಿಕ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಉದ್ದೇಶಪೂರ್ವಕವಾಗಿ ಅವುಗಳನ್ನು ನಿರ್ಲಕ್ಷಿಸಿ, ಖಾಸಗಿ ಆರೋಗ್ಯ ಉದ್ಯಮಕ್ಕೆ ಅವಕಾಶ ಕಲ್ಪಿಸುತ್ತಿವೆ. ಇದರ ಹೊರೆ ಅಂತಿಮವಾಗಿ ಬಡವರು, ದುಡಿಯುವ ವರ್ಗ, ರೈತರು ಮತ್ತು ಮಧ್ಯಮ ವರ್ಗದ ಜನರ ಮೇಲೇ ಬೀಳುತ್ತಿದೆ ಎಂದು ಅವರು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲೆಯಂತಹ ದೊಡ್ಡ ಜಿಲ್ಲೆಯಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಸರ್ಕಾರಿ ವಿಶೇಷ ಆಸ್ಪತ್ರೆಗಳ ಕೊರತೆ ಇರುವುದು ಸರ್ಕಾರದ ಆದ್ಯತೆಗಳನ್ನೇ ಪ್ರಶ್ನಿಸುವ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕಗಳನ್ನು ತಕ್ಷಣ ಸ್ಥಾಪಿಸಬೇಕು. ನಗರ ಆರೋಗ್ಯ ಕೇಂದ್ರಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರನ್ನು ಕಾಯಂಗೊಳಿಸಿ, ಸಾರ್ವಜನಿಕ ಆರೋಗ್ಯ ಸೇವೆಯನ್ನು ಶಾಶ್ವತ ಸಿಬ್ಬಂದಿಯ ಮೂಲಕ ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸುವುದು ಕೇವಲ ಆರೋಗ್ಯದ ಪ್ರಶ್ನೆಯಲ್ಲ; ಅದು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನರ ಬದುಕಿನ ಹಕ್ಕಿನ ಪ್ರಶ್ನೆಯಾಗಿದೆ. ಆದ್ದರಿಂದ ಆರೋಗ್ಯ ಕ್ಷೇತ್ರದ ಖಾಸಗೀಕರಣದ ವಿರುದ್ಧ ಜನರು ವ್ಯಾಪಕವಾಗಿ ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಅವರು ಕರೆ ನೀಡಿದರು.

ಭಾರತಿ ಬೋಳಾರ ಸ್ವಾಗತಿಸಿದರು. ನಾಗೇಶ್ ಕೋಟ್ಯಾನ್ ವಂದಿಸಿದರು. ಮಾದುರಿ ಬೋಳಾರ ಹಾಗೂ ಮಯೂರಿ ಬೋಳಾರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article