ಇರುವೈಲಿನ ಗದ್ದೆಯಲ್ಲಿ "ಕೃಷಿ ಪಾಠ" ಕಲಿತ ಕುಪ್ಪೆಪದವು ಕಾವೇರಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು
ನೇಜಿ ನೆಡುವ ಸಂದಭ೯ದಲ್ಲಿ ಹಿರಿಯರಾದ ಯಮುನಾ ಮಜ್ಜಿಗುರಿ ಅವರು ಪಾಡ್ದನ ಹೇಳಿ ಕೊಟ್ಟಾಗ ವಿದ್ಯಾಥಿ೯ಗಳು ತಾವೂ ಕೂಡಾ " ಓ ಬೇಲೆ" ಗೆ ಧ್ವನಿಗೂಡಿಸಿ ಸಂತಸಪಟ್ಟರು.
ಮಧ್ಯಾಹ್ನದ ನಂತರ ಕೆಸರು ಗದ್ದೆಯಲ್ಲಿ ವಿದ್ಯಾಥಿ೯ಗಳಿಗೆ ವಿವಿಧ ಆಟೋಟ ಸ್ಪಧೆ೯ಗಳನ್ನು ಆಯೋಜಿಸಿದ್ದು ಇದರಲ್ಲಿ ವಿದ್ಯಾಥಿ೯ಗಳೆಲ್ಲರೂ ಖುಷಿಯಿಂದ ಪಾಲ್ಗೊಂಡರು.
ಇದಕ್ಕೂ ಮೊದಲು ಇರುವೈಲು ಗ್ರಾ. ಪಂ. ಮಾಜಿ ಸದಸ್ಯ ವಲೇರಿಯನ್ ಕುಟಿನ್ಹ ಕಾಯ೯ಕ್ರಮವನ್ನು ಉದ್ಘಾಟಿಸಿದರು.
ಕೃಷಿಕ ಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ವಿದ್ಯಾಥಿ೯ಗಳು ಶಾಲೆಯ ಪಾಠದ ಜತೆಗೆ ಕೃಷಿಯ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು ಮತ್ತು ತಮ್ಮನ್ನೂ ತೊಡಗಿಸಿಕೊಂಡು ಮಂದಿನ ಪೀಳಿಗೆಗೆ ಕೃಷಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.
ಧಮ೯ಣ್ಣ ಪೂಜಾರಿ ಕುಕ್ಕಿಮಾರ್, ಲಕ್ಷ್ಮಣ ಮಜ್ಜಿಗುರಿ ಉಪಸ್ಥಿತರಿದ್ದರು.
ರೈತರ ಪರವಾಗಿ ಪ್ರಧಾನಿ ಮೋದಿಗೆ ಮನವಿ ಮಾಡಿದ ವಿದ್ಯಾಥಿ೯ಗಳು:
ಶಾಲೆಯ ವಿದ್ಯಾರ್ಥಿಗಳಾದ ನಿಶಾಂತ್ ಮತ್ತು ನಿಶಿತಾ ರೈತರ ಸಂಕಷ್ಟದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿ, ರೈತರು ಹಗಲು-ರಾತ್ರಿ ಶ್ರಮಪಟ್ಟು ದೇಶಕ್ಕೆ ಅನ್ನ ನೀಡುತ್ತಿದ್ದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದುಬಾರಿ ಬೆಲೆ, ನೀರಿನ ಕೊರತೆ ಮತ್ತು ಅತಿವೃಷ್ಟಿಯಿಂದ ಉಂಟಾಗುವ ಬೆಳೆ ಹಾನಿ ರೈತರ ಪ್ರಮುಖ ಸಮಸ್ಯೆಗಳಾಗಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಉತ್ತಮ ನೀರಾವರಿ ವ್ಯವಸ್ಥೆ ಕಲ್ಪಿಸಿ, ಬೆಳೆ ಹಾನಿಯಾದಾಗ ತ್ವರಿತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು. ರೈತರ ಬದುಕು ಸುಧಾರಿಸಲು ಸರ್ಕಾರ ಅಗತ್ಯ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ವಿದ್ಯಾಥಿ೯ಗಳಿಗೆ ಕೃಷಿಯ ಬಗ್ಗೆ "ಕ್ಯೂರಿಸಿಟಿ" ಎಂಬ ವಿಷಯದಲ್ಲಿ ವಿಜ್ಞಾನ ಪುಸ್ತಕದಲ್ಲಿ ಪಾಠವಿದೆ. ಇದನ್ನು ಮಕ್ಕಳಿಗೆ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಕುಳ್ಳಿರಿಸಿ ಕಲಿಸಿದರೆ ಅಥ೯ವಾಗಲು ಕಷ್ಟ ಎಂಬುದನ್ನು ಅರಿತು ಪರಿಸರಕ್ಕೆ ಕರೆದುಕೊಂಡು ಬಂದು ಗದ್ದೆಯಲ್ಲಿ ಅವರಿಗೆ ನೇಜಿ, ಅಕ್ಕಿ ಮತ್ತು ಬತ್ತದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದ್ದು ವಿದ್ಯಾಥಿ೯ಗಳು ಸ್ವ ಅನುಭವವನ್ನು ಪಡೆದುಕೊಂಡು ಸಂತಸಪಟ್ಟರು : ಶಾಲೆಟ್ ವಾಸ್ (ಕಾವೇರಿ ವಿದ್ಯಾಲಯದ ಮುಖ್ಯ ಶಿಕ್ಷಕಿ)
ಗದ್ದೆಯ ಯಜಮಾನ ಪ್ರಭಾಕರ ಅವರು ಮಾತನಾಡಿ, ಕೆಸರು ಗದ್ದೆಯಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಉತ್ತಮ. ಕೇವಲ ಮೊಬೈಲ್ ಆಟಗಳಿಗೆ ಸೀಮಿತವಾಗುತ್ತಿರುವ ಮಕ್ಕಳಿಗೆ ಕೃಷಿ ಪಾಠ ಅಗತ್ಯ ಎಂದರು.

