ಎಪಿಎಂಸಿ ಅಧಿಕಾರಿಯಿಂದ ಡಿ. ಗ್ರೂಪ್ ನೌಕರೆಗೆ ಲೈಂಗಿಕ ಕಿರುಕುಳ ಆರೋಪ: ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಕಚೇರಿಗೆ ದಾಳಿ
ಸಂತ್ರಸ್ತೆಯು ತಿಂಗಳಿಗೆ 15,000 ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದು, ತನ್ನ ಬೇಡಿಕೆಗೆ ಸಮ್ಮತಿಸಿದರೆ ವೇತನವನ್ನು 25,000 ರೂಪಾಯಿಗೆ ಏರಿಸುವುದಾಗಿ ಆರೋಪಿ ಆಮಿಷ ಒಡ್ಡಿದ್ದರು. ಆತನ ಅಸಭ್ಯ ಬೇಡಿಕೆಗೆ ಒಪ್ಪದಿದ್ದಾಗ, ಕಚೇರಿಯ ಒಳಗಿನ ಕೆಲಸದಿಂದ ತೆಗೆದು ಶೌಚಾಲಯ ಶುಚಿಗೊಳಿಸುವ ಹಾಗೂ ಗುಡಿಸುವ ಕೆಲಸಕ್ಕೆ ಹಾಕಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
‘ಹಸಿರು ಸೀರೆ’..
ಕಳೆದ ಶನಿವಾರ ಆರೋಪಿಯು ಸಂತ್ರಸ್ತೆಗೆ ಕರೆ ಮಾಡಿ, ತನ್ನೊಂದಿಗೆ ಸಹಕರಿಸಲು ಸಮ್ಮತಿ ಇದ್ದರೆ ಸೋಮವಾರ ಹಸಿರು ಬಣ್ಣದ ಸೀರೆ ಅಥವಾ ಉಡುಪು ಧರಿಸಿ ಬರಬೇಕು. ಹಸಿರು ಉಡುಪು ಧರಿಸಿದರೆ ಸಮ್ಮತಿ ಎಂದು ತಿಳಿಯುವುದಾಗಿ ಷರತ್ತು ವಿಧಿಸಿದ್ದನೆಂದು ಆರೋಪಿಸಿದ್ದಾರೆ.
ಕಚೇರಿಗೆ ದಾಳಿ ಹಾಗೂ ಗದ್ದಲ:
ಆರೋಪಿಯ ಈ ವರ್ತನೆಯ ವಿರುದ್ಧ ಪ್ರತಿಭಟಿಸುವ ಸಲುವಾಗಿ, ಸೋಮವಾರ ಪ್ರತಿಭಾ ಕುಳಾಯಿ ಹಾಗೂ ಹಲವು ಮಹಿಳಾ ಮುಖಂಡರು ಮುನ್ನೆಚ್ಚರಿಕೆಯಾಗಿ ಹಸಿರು ಬಣ್ಣದ ಸೀರೆ ಧರಿಸಿ ಎಪಿಎಂಸಿ ಕಚೇರಿಗೆ ಆಗಮಿಸಿದರು. ಕಚೇರಿಯಲ್ಲಿದ್ದ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ತಾನೇನು ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ ಅಧಿಕಾರಿಗೆ ಮಹಿಳೆಯರು ತಪರಾಕಿ ನೀಡಿ, "ನಿನ್ನ ಜೇಬಿನಿಂದ ಸಂಬಳ ನೀಡುತ್ತಿದ್ದೀಯಾ?" ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪಣಂಬೂರು ಠಾಣಾ ಉಪನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಂತ್ರಸ್ತೆ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲೇ ಆಕೆಗೆ ರಕ್ಷಣೆ ಸಿಗಬೇಕು. ಕಂಪ್ಲೇಂಟ್ ನೀಡಿದ ಕಾರಣಕ್ಕೆ ಆಕೆಯನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಪ್ರತಿಭಾ ಕುಳಾಯಿ ಎಪಿಎಂಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಘಟನೆಯ ಸಂಬಂಧ ಎಸಿಪಿ, ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಲಾಗುವುದು ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪಣಂಬೂರು ಪೊಲೀಸ್ ಇನ್ಷ್‌ಪೆಕ್ಟರ್ ಸಂತ್ರಸ್ತೆಯಿಂದ ದೂರು ಪಡೆದು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
