ಪ್ರಾಮಾಣಿಕತೆ ಮೆರೆದ ಸಿಐಎಸ್‌ಎಫ್ ಸಿಬಂದಿ

ಪ್ರಾಮಾಣಿಕತೆ ಮೆರೆದ ಸಿಐಎಸ್‌ಎಫ್ ಸಿಬಂದಿ

ಮಂಗಳೂರು: ದುಬೈನಿಂದ ಬಂದಿದ್ದ ಯುವಕನೊಬ್ಬ ತನ್ನ ಪರ್ಸ್‌ನ್ನು ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಬಿಟ್ಟು ಹೋಗಿದ್ದು, ಬಳಿಕ ಅದನ್ನು ಗಮನಿಸಿದ ಸಿಐಎಸ್‌ಎಫ್ ಸಿಬಂದಿ ಪ್ರಯಾಣಿಕನ ಮಾಹಿತಿ ಕಲೆಹಾಕಿ ಬೆಲೆಬಾಳುವ ಸೊತ್ತುಗಳಿದ್ದ ಪರ್ಸ್ ಅನ್ನು ಹಿಂದಿರುಗಿಸಿದ ಘಟನೆ ನಡೆದಿದೆ.

ಜುಲೈ 26ರಂದು ಬೆಳಗ್ಗೆ 6.15ರ ವೇಳೆಗೆ ಸಿಐಎಸ್‌ಎಫ್ ಸಿಬಂದಿ ವಿಠಲ್ ಹೊಸಮನಿ ಅವರು ಪಾರ್ಕಿಂಗ್ ಏರಿಯಾದಲ್ಲಿ ಕಪ್ಪು ಬಣ್ಣದ ಪರ್ಸ್ ಒಂದು ಟ್ರಾಲಿಯಲ್ಲಿ ಉಳಿದಿರುವುದನ್ನು ಗಮನಿಸಿದ್ದರು. ಕೆಳ ಅಂತಸ್ತಿನ ಮಹಡಿಯಲ್ಲಿ ಈ ಪರ್ಸ್ ಸಿಕ್ಕಿದ್ದು ಯಾರೋ ಪ್ರಯಾಣಿಕರು ಬಿಟ್ಟು ಹೋಗಿದ್ದಿರಬೇಕೆಂಬ ಅನುಮಾನ ಇತ್ತು.

ಆದರೂ ಶ್ವಾನ ದಳವನ್ನು ಕರೆಸಿ ತಪಾಸಣೆ ನಡೆಸಿದ್ದು ಯಾವುದೇ ಸ್ಫೋಟಕ ವಸ್ತು ಇಲ್ಲವೆಂದು ಖಚಿತ ಪಡಿಸಿದ ಬಳಿಕ ಪರ್ಸ್ ತೆರೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ, ಅದರೊಳಗೆ ನಿಶಾಲ್ ಶಾಹಿಕ್ ಹೆಸರಿನ ಪಾಸ್ ಪೋರ್ಟ್, ಐಫೋನ್ ಮೊಬೈಲ್, ಒಂದು ಗೋಲ್ಡ್ ರಿಂಗ್, 500 ದಿರ್ಹಮ್ (ಅಂದಾಜು 11 ಸಾವಿರ ರೂ.), 10 ಸಾವಿರ ಡಾಲರ್ (9 ಲಕ್ಷ ರೂ. ಮೌಲ್ಯ), ಒಂದು ಬೋರ್ಡಿಂಗ್ ಪಾಸ್ ಮತ್ತು ಬ್ಯಾಂಕ್ ಸಂಬಂಧಪಟ್ಟ ಕಾರ್ಡುಗಳು ಇದ್ದವು. ಸಿಸಿಟಿವಿ ಪರಿಶೀಲನೆ ವೇಳೆಯಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿರುವುದು ಪತ್ತೆಯಾಗಿತ್ತು. ಅಲ್ಲದೆ, ಆ ವ್ಯಕ್ತಿ ಅದಾಗಲೇ ಏರ್ಪೋರ್ಟ್ ನಿಂದ ಹೊರಕ್ಕೆ ತೆರಳಿರುವುದು ತಿಳಿದುಬಂತು.  

ಆನಂತರ, ಬೋರ್ಡಿಂಗ್ ಪಾಸ್ ನಲ್ಲಿದ್ದ ಮೊಬೈಲ್ ನಂಬರ್ ಆಧರಿಸಿ ಕರೆ ಮಾಡಿ ಪ್ರಯಾಣಿಕನಿಗೆ ಪರ್ಸ್ ಬಿಟ್ಟು ಹೋಗಿರುವುದನ್ನು ತಿಳಿಸಲಾಯಿತು. ನಿಶಾಲ್ ಶಾಹಿಕ್ ಎನ್ನುವ ಯುವಕ ದುಬೈನಿಂದ ಮಂಗಳೂರಿಗೆ ಬಂದಿದ್ದು, ತನ್ನ ಬ್ಯಾಗಿನೊಂದಿಗೆ ಟ್ರಾಲಿ ಬಿಟ್ಟು ತೆರಳುವಾಗ ಪರ್ಸ್ ಉಳಿದುಕೊಂಡಿತ್ತು. ಬಳಿಕ ನಿಶಾಲ್ ಮರಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದು ಸಿಐಎಸ್‌ಎಫ್ ಸಿಬಂದಿ ನಿಗದಿತ ಪರಿಶೀಲನೆ ಮುಗಿಸಿ ಪರ್ಸ್ ಹಿಂತಿರುಗಿಸಿದರು. ಪ್ರಾಮಾಣಿಕತೆ ತೋರಿದ ಸಿಬಂದಿಯ ಬಗ್ಗೆ ಪ್ರಯಾಣಿಕ ಪ್ರಶಂಸೆ ವ್ಯಕ್ತಪಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article