ಆಂಬುಲೆನ್ಸ್ ಮೂಲಕ ಡ್ರಗ್ಸ್ ದಂಧೆ: ಆರೋಪಿ ದುಬೈಗೆ ಪರಾರಿಯಾಗಿರುವ ಶಂಕೆ

ಆಂಬುಲೆನ್ಸ್ ಮೂಲಕ ಡ್ರಗ್ಸ್ ದಂಧೆ: ಆರೋಪಿ ದುಬೈಗೆ ಪರಾರಿಯಾಗಿರುವ ಶಂಕೆ


ಮಂಗಳೂರು: ಆಂಬುಲೆನ್ಸ್ ಮೂಲಕ ಡ್ರಗ್ಸ್ ದಂಧೆ ನಡೆತ್ತಿದ್ದ ಆರೋಪ ಎದುರಿಸುತ್ತಿರುವ ಬೆಳ್ತಂಗಡಿಯ ಬಾಬಾ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಬಂಧನ ಭೀತಿಯಿಂದ ದುಬೈಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. 

ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಜಲೀಲ್‌ಗಾಗಿ ಮಂಗಳೂರು ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದು, ಆತನ ಚಲನವಲನಗಳ ಕುರಿತು ಮಹತ್ವದ ಮಾಹಿತಿ ಕಲೆಹಾಕುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಜುಲೈ 25ರಂದು ಸ್ನೇಹಿತರ ಸಹಾಯದಿಂದ ಜಲೀಲ್ ಬೆಂಗಳೂರಿನ ಮೂಲಕ ದುಬೈಗೆ ತೆರಳಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಈ ಬಗ್ಗೆ ಪ್ರಯಾಣದ ದಾಖಲೆಗಳು ಹಾಗೂ ಇತರ ತಾಂತ್ರಿಕ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸರು ಸುಮಾರು 5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದರು. ತನಿಖೆ ವೇಳೆ ಈ ಜಾಲದ ನಾಲ್ಕನೇ ಆರೋಪಿಯಾಗಿ ಜಲೀಲ್ ಹೆಸರು ಹೊರಬಂದಿದ್ದು, ಮೂವರು ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ಆತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆಂಬುಲೆನ್ಸ್ ಸಮೇತ ನಾಪತ್ತೆಯಾಗಿದ್ದಾನೆ.

ತನಿಖೆಯಲ್ಲಿ ಜಲೀಲ್ ಜಿಲ್ಲೆಯಲ್ಲಿ ಆಂಬುಲೆನ್ಸ್ ಬಳಸಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಆತನ ಬಂಧನಕ್ಕಾಗಿ ಮಂಗಳೂರು ಸಿಸಿಬಿ ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ಶೋಧ ನಡೆಸುತ್ತಿದೆ. ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಬಂಧಿತ ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಮಾಹಿತಿ ವಿನಿಮಯವೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article