ಹಲವಾರು ಒತ್ತಡಗಳನ್ನು ಯೋಗದಿಂದ ಏಕಕಾಲದಲ್ಲಿ ನಿಯಂತ್ರಿಸಬಹುದು: ಸ್ವಾಮಿ ಯುಗೇಶನಂದಾಜೀ
Tuesday, July 7, 2026
ಮಂಗಳೂರು: ನಮ್ಮ ಭಾರತೀಯ ಕಲೆಯಾದ ‘ಯೋಗ’ವನ್ನು ತನ್ನ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಬಹಳಷ್ಟು ಸಹಕಾರಿಯಾಗಬಹುದು. ಏಕಕಾಲಕ್ಕೆ ಹಲವು ಕೆಲಸ ಕಾರ್ಯಗಳ ಒತ್ತಡವಿದ್ದರೂ ಮನಸನ್ನು ನಿಯಂತ್ರಣಗೊಳಿಸುವ ವಿಧಾನ ಗೊತ್ತಿದ್ದರೆ ಸಮರ್ಪಕವಾಗಿ ತನ್ನ ಕೆಲಸ ಕಾರ್ಯಗಳನ್ನು ಹಾಯಾಗಿ ಆರಾಮವಾಗಿ ನಿರ್ವಹಿಸಬಹುದು ಎಂದು ರಾಮಕೃಷ್ಣ ಮಠದ ಬಾಲಕಾಶ್ರಮದ ವಾರ್ಡನ್ ಸ್ವಾಮಿ ಯುಗೇಶನಂದಾಜೀ ಹೇಳಿದರು.
ಅವರು ಜು.6 ರಂದು ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ಎರಡು ವಾರಗಳ ಕಾಲ ಜರುಗುವ ಸಂಜೆಯ ಯೋಗ ಶಿಬಿರವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಇಲ್ಲಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಯೋಗವನ್ನು ವ್ಯಕ್ತಿಯು ತನ್ನ ಜೀವನದಲ್ಲಿ ಸಮರ್ಪಕವಾಗಿ ಅಳವಡಿಸಿಕೊಂಡರೆ ನೆಮ್ಮದಿಯ ಬಾಳುವೆಗೆ ಸೋಪಾನವಾಗುವುದು. ಧ್ಯಾನ ಮತ್ತು ಪ್ರಾಣಾಯಾಮದಿಂದ ಕೂಡಿದ ‘ಯೋಗ’ವನ್ನು ಮಾಡುವುದರಿಂದ ಶರೀರದ ಪ್ರತಿಯೊಂದು ಅಂಗಾಂಗಗಳಿಗೆ ನವಚೈತನ್ಯ ಒದಗಿ ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಹಾಗೂ ತಾಳ್ಮೆ, ಶಾಂತಿ ಒದಗಿ ಸಹಜವಾಗಿ ನರಮಂಡಲ ಚೈತನ್ಯ ಶೀಲವಾಗುತ್ತದೆ ಎಂದು ತಿಳಿಸಿದರು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಅವರು ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಪ್ರಯೋಜನಗಳನ್ನು ತಿಳಿಸಿದರು. ಪತಂಜಲಿ ಋಷಿಗಳು ತಮ್ಮ ಯೋಗಶಾಸ್ತ್ರದಲ್ಲಿ ನಾಲ್ಕು ಅಧ್ಯಾಯಗಳ ಮೊದಲ ಅಧ್ಯಾಯದ ಸಮಾಧಿ ಪಾದದಲ್ಲಿ ಈ ಸೂತ್ರವನ್ನು ಹೇಳಿದ್ದಾರೆ. ಯೋಗದ ಅಧ್ಯಾಯನ ಮತ್ತು ಅಭ್ಯಾಸದ ಪರಿಚಯವಾಗಿದೆ. ಅಥಃ ಎಂದರೆ ವಿವರಣೆಯನ್ನು ಪರಿಚಯಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಯೋಗ ಎಂದರೆ ಏಕತೆ, ಸಾಮರಸ್ಯ, ಅನುಶಾಸನಂ ಎಂದರೆ ಅನುಭವದ ಪರಿಚಯ ಸೂಚನೆ ಶಿಸ್ತು ಆಗಿದೆ. ಮಂತ್ರವಾಗಿ ಬಳಸಬಹುದು ಮೊದಲ ಹಂತಗಳು ಯಾವಾಗಲೂ ಕಠಿನವಾಗಿದೆ. ಯೋಗ ಅಧಿವೇಶನವನ್ನು ಪ್ರಾರಂಭಿಸುವ ಅನುಭವಿ ಯೋಗಿಯಾಗಿದ್ದರೂ ಯೋಗದ ಅಭ್ಯಾಸಕ್ಕೂ ಇದು ಅನ್ವಯಿಸುತ್ತದೆ. ಏಕಾಗ್ರತೆ ಮತ್ತು ಅಲೋಚನೆಯ ಕಾರ್ಯದ ಮೂಲಕ ತಿಳಿದುಕೊಳ್ಳುವುದು. ಯೋಗಕ್ಕೆ ಸಂಬಂದಿಸಿದಂತೆ ಸೂಚನೆಗಳು ಅಥವಾ ಪೂರ್ವಶಿಸ್ತು, ಅಶುದ್ಧ ಮನಸ್ಸು ಮತ್ತು ಅಲೆದಾಡುವ ಪ್ರವೃತ್ತಿ ಇರುವವರು ಈ ಶಾಸ್ತ್ರದಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಅಭ್ಯಾಸವಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ. ಇಲ್ಲಿ ಶಿಸ್ತಿನ ಗುಣಮಟ್ಟ ಹೆಚ್ಚು ಮುಖ್ಯ ಎಂದು ತಿಳಿಸಿದರು.
ದೇಲಂಪಾಡಿಯವರ ಶಿಷ್ಯರಾದ ಭಾರತಿ, ಕಾರ್ತಿಕ್, ತುಕರಾಮ, ಚಂದ್ರಹಾಸ ಬಾಳ ಹಾಗೂ ಪ್ರೇಮ ಪದ್ಮಾವತಿ, ವಿ. ಪ್ರೇಮ ಸಹಕರಿಸಿದರು.
ಆಸಕ್ತರು ನೋಂದಾಯಿಸಿಕೊಳ್ಳಲು ಆಶ್ರಮದ ಕಾರ್ಯಾಲದ ದೂ.ಸಂ: 0824-2414412 ಸಂಪರ್ಕಿಸಬಹುದಾಗಿದೆ.


