ಶ್ರೀ ಗುರುಚರಣಾಮೃತ’ ಬಿಡುಗಡೆ
ಮಂಗಳೂರು: ಬಿ. ಸಂಜೀವ ಕೆ.ಬಿ. ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ‘ಶ್ರೀ ಗುರುಚರಣಾಮೃತ’ ಹಾಗೂ ‘ತೀಯಾ ಕುಲತಿಲಕ ಕುಲರತ್ನ ಮಹಾದಾನಿ ರೋಹಿದಾಸ ಬಂಗೇರ’ ಪುಸ್ತಕ ಬಿಡುಗಡೆ ಸಮಾರಂಭ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆಯಿತು.
‘ಶ್ರೀ ಗುರುಚರಣಾಮೃತ’ ಪುಸ್ತಕದಲ್ಲಿ ಕೊಂಡೆವೂರು ಕ್ಷೇತ್ರ ಪರಿಚಯ ಹಾಗೂ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಪೂರ್ವಾಶ್ರಮ, ಅವರು ಆಧ್ಯಾತ್ಮಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ವಿಷಯಗಳಿವೆ. ‘ತೀಯಾ ಕುಲತಿಲಕ ಕುಲರತ್ನ ಮಹಾದಾನಿ ರೋಹಿದಾಸ ಬಂಗೇರ’ ಪುಸ್ತಕ ರೋಹಿದಾಸ ಬಂಗೇರ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ವಿವರ ಒಳಗೊಂಡಿದೆ.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಸಾಹಿತ್ಯ ಕೃತಿಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಶುಭ ಹಾರೈಸಿದರು.
ಅತಿಥಿಯಾಗಿದ್ದ ಮುಂಬೈನ ಸಮಾಜ ಸೇವಕ ಶಂಕರ ಸುವರ್ಣ ಮಾತನಾಡಿ, ಮಂಗಳೂರಿನಲ್ಲಿ ಟೈಲರಿಂಗ್ ನಡೆಸುತ್ತಿದ್ದ ರೋಹಿದಾಸ ಎಸ್. ಬಂಗೇರ ಅವರು ಮುಂಬೈಗೆ ತೆರಳಿ ಉದ್ಯಮಿಯಾಗಿ ಸಮಾಜಸೇವೆ, ಶಿಕ್ಷಣ, ಧಾರ್ಮಿಕ ಸೇವೆ ನಡೆಸಿದ್ದಾರೆ. ಅವರ ಬಗ್ಗೆ ಪುಸ್ತಕ ಹೊರತಂದಿರುವುದು ಶ್ಲಾಘನೀಯ ಎಂದರು.
ಅತಿಥಿಯಾಗಿದ್ದ ತೀಯಾ ವೆಲ್‌ಫೇರ್ ಸ್ಥಾಪಕ ಅಧ್ಯಕ್ಷ ಗೋವಿಂದ ಮಂಜೇಶ್ವರ ಮಾತನಾಡಿ, ರೋಹಿದಾಸ ಎಸ್. ಬಂಗೇರ ಅವರ ಶೂನ್ಯದಿಂದ ಸಾಮ್ರಾಜ್ಯ ನಿರ್ಮಿಸಿದ ಶ್ರೀಮಂತ ವ್ಯಕ್ತಿ. ಅವರ ಸಾಧನೆಯ ಪುಸ್ತಕ ಪ್ರಕಟಿಸಿರುವುದು ಸ್ತುತ್ಯರ್ಹ ಎಂದರು.
ಎರಡೂ ಪುಸ್ತಕಗಳ ಸಂಪಾದಕರಾದ ಕಡಲ ಸೃಷ್ಟಿ ಕನ್ನಡ ಪಾಕ್ಷಿಕ ಸಂಪಾದಕ ಬಿ. ಸಂಜೀವ ಕೆ.ಬಿ., ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು. ಜಯಂತಿ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.