ಸಂಡೆ ಬಜಾರ್ ವ್ಯಾಪಾರ ಕೇಂದ್ರಕ್ಕೆ ಆಯುಕ್ತರ ಭೇಟಿ

ಸಂಡೆ ಬಜಾರ್ ವ್ಯಾಪಾರ ಕೇಂದ್ರಕ್ಕೆ ಆಯುಕ್ತರ ಭೇಟಿ


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತ ರಾಹುಲ್ ರತ್ನಂ ಪಾಂಡೆ ಗುರುವಾರ ನಗರದ ಪುರಭವನದ ಬಳಿಯ ಸಂಡೆ ಬಜಾರ್ ವ್ಯಾಪಾರ ಕೇಂದ್ರ ಹಾಗೂ ಬೀದಿಬದಿ ವ್ಯಾಪಾರ ವಲಯಕ್ಕೆ ಭೇಟಿ ನೀಡಿ ವ್ಯಾಪಾರಿಗಳ ಸಮಸ್ಯೆ ಆಲಿಸಿದರು.

ಬಳಿಕ ಮಾತನಾಡಿದ ಅವರು ಬೀದಿ ಬದಿ ವ್ಯಾಪಾರಕ್ಕೆ ಸಂಬಂಧಿಸಿ ಏನೇನು ನಿಯಮಗಳಿವೆ ಎನ್ನುವುದನ್ನು ಪರಿಶೀಲನೆ ನಡೆಸಲಾಗುವುದು. ಮುಂದಿನ ವಾರ ಸಭೆ ನಡೆಸಿ ನಗರದ ಎಲ್ಲಾ ಬೀದಿ ಬದಿ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. 

ನಗರದ ಕುದ್ಮುಲ್ ರಂಗರಾವ್ ಪುರಭವನದ ಆಸುಪಾಸು ಸಂಡೆ ಬಜಾರ್ ತೆರವು ಕಾರ್ಯಾಚರಣೆ ನಡೆಸುವುದರ ಜೊತೆಗೆ ವ್ಯಾಪಾರಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕನಿಷ್ಟ 40 ಮಂದಿಗೆ ಸಂಡೇ ವ್ಯಾಪಾರಕ್ಕೆ ಪಾಲಿಕೆಯು ಅವಕಾಶ ನೀಡಬೇಕು ಎಂದು ವ್ಯಾಪಾರಿಗಳು ಆಯುಕ್ತರನ್ನು ಒತ್ತಾಯಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಮುಂದಿನ ರವಿವಾರ ಯಾರೂ ಕೂಡ ವ್ಯಾಪಾರ ನಡೆಸಬಾರದು. ಆ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಸಂಯಮದಿಂದ ವರ್ತಿಸಬೇಕು. ಅಧಿಕಾರಿಗಳಿಂದ ತಪ್ಪಾಗಿದ್ದರೆ ನನ್ನ ಗಮನಕ್ಕೆ ತರಬೇಕು ಎಂದರು. 

ಪಾಲಿಕೆಯಿಂದ ಬೀದಿ ವ್ಯಾಪಾರಿಗಳಿಗೆ ನಿರ್ಮಿಸಲಾಗಿರುವ ವಲಯಕ್ಕೆ ಭೇಟಿ ನೀಡಿದ ಆಯುಕ್ತರು ಅಲ್ಲಿನ ವ್ಯವಸ್ಥೆ ಗಳನ್ನು ಪರಿಶೀಲನೆ ನಡೆಸಿದರು. ವಲಯದಲ್ಲಿ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆ, ವ್ಯಾಪಾರಿಗಳು ಹೊಂದಿರುವ ಐಡಿ ಕಾರ್ಡ್ ಪರಿಶೀಲಿಸಿದರು. ಬಳಿಕ ಪ್ರತಿಕ್ರಿಯೆ ನೀಡಿದ ಅವರು ಪಾಲಿಕೆ ನಿರ್ಮಿಸಿದ ವಲಯ ಸರಿಯಾಗಿ ಬಳಕೆಯಾಗುತ್ತಿಲ್ಲ. ಅದನ್ನು ಯಾವ ರೀತಿಯಲ್ಲಿ ಬಳಕೆಗೆ ಯೋಗ್ಯ ಮಾಡಬಹುದು ಎನ್ನುವ ಸಲಹೆಗಳನ್ನು ಬೀದಿ ವ್ಯಾಪಾರಿಗಳಿಂದ ಪಡೆಯಲಾಗಿದೆ. ಈ ಬಗ್ಗೆ ಸಭೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು. 

ಬೀದಿಬದಿ ವ್ಯಾಪಾರಿಗಳ ಸಂಘದ ಮುಖಂಡರಾದ ಬಿ.ಕೆ. ಇಮ್ತಿಯಾಝ್, ಸಂತೋಷ್ ಆರ್.ಎಸ್, ಮುಹಮ್ಮದ್ ಮುಸ್ತಫಾ, ಅಬ್ದುಲ್ ರಹಿಮಾನ್, ಶಿವಪ್ಪ, ಸಿಕಂದರ್, ಶಿವಾನಂದ, ಪಕೀರ ನಾಯ್ಕ್, ಗದಿಗಪ್ಪ, ಅಬ್ದುಲ್ ಖಾದರ್ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article