ದ.ಕ. ಜಿಲ್ಲೆಯಲ್ಲಿ ದಿನವಿಡೀ ಬಿಟ್ಟುಬಿಟ್ಟು ಉತ್ತಮ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ದಿನವಿಡೀ ಬಿಟ್ಟುಬಿಟ್ಟು ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಬೆಳಗಿನ ಜಾವದಿಂದಲೇ ಆರಂಭವಾದ ಮಳೆಯು ಸಂಜೆಯ ವೇಳೆಗೆ ಗ್ರಾಮೀಣ ಭಾಗಗಳಲ್ಲಿ ಬಿರುಸು ಪಡೆದುಕೊಂಡಿತು. ಸೂರ್ಯನ ಪ್ರಖರ ದರ್ಶನದಿಂದ ವಾತಾವರಣ ಕೆಲವೊಮ್ಮೆ ಬಿಸಿಯೇರುತ್ತಿದ್ದು, ದಿನವಿಡೀ ಮೋಡಕವಿದ ವಾತಾವರಣ ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಮಳೆಯ ತೀವ್ರತೆ ಕೊಂಚ ತಗ್ಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಧರ್ಮಸ್ಥಳ, ಚಾರ್ಮಾಡಿ ಘಾಟಿ ಪ್ರದೇಶ, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ಸೇರಿದಂತೆ ಪಶ್ಚಿಮ ಘಟ್ಟದ ತಳಭಾಗದ ಪ್ರದೇಶಗಳಲ್ಲಿ ಮಳೆಯ ಆರ್ಭಟ ಕೊಂಚ ಹೆಚ್ಚೇ ಇತ್ತು. ಇತ್ತ ಮಂಗಳೂರು ನಗರ, ಕೋಣಾಜೆ, ಮೂಲ್ಕಿ, ಪಣಂಬೂರು ಹಾಗೂ ಉಳ್ಳಾಲದಲ್ಲೂ ದಿನದಲ್ಲಿ ಹಲವು ಬಾರಿ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಕರಾವಳಿ ತೀರ ಪ್ರದೇಶದ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.
ಶನಿವಾರ ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಗಾಳಿಯೊಂದಿಗೆ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಆಗಸ್ಟ್ 1ರ ತನಕ ಈ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ. 2ನೇ ತಾರೀಕಿನಿಂದ ಮಳೆ ಸ್ವಲ್ಪ ಕಡಿಮೆಯಾಗಬಹುದು.
ಬೆಳ್ತಂಗಡಿಯಲ್ಲಿ ಅತೀ ಹೆಚ್ಚು ಮಳೆ
ಶುಕ್ರವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 29.6 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಬೆಳ್ತಂಗಡಿ 46.2 ಮಿ.ಮೀ ಮಳೆಯಾಗಿದೆ. ಉಳ್ಳಾಲದಲ್ಲಿ 12.0 ಮಿಮಿ, ಮೂಡುಬಿದಿರೆ 19.9 ಮಿ.ಮೀ, ಕಡಬದಲ್ಲಿ 45.0 ಮಿಮಿ, ಬಂಟ್ವಾಳ 13.4 ಮಿ.ಮೀ, ಪುತ್ತೂರು 14.6 ಮಿ.ಮೀ, ಮಂಗಳೂರಿನಲ್ಲಿ 13.8 ಮಿಮಿ ಮಳೆಯಾಗಿದೆ. ಸುಳ್ಯದಲ್ಲಿ 25.5 ಮಿ.ಮೀ., ಮೂಲ್ಕಿ 7.2 ಮಿ.ಮೀ. ಮಳೆ ವರದಿಯಾಗಿದೆ. ನೇತ್ರಾವತಿ ನದಿ (ಬಂಟ್ವಾಳ) 6.080 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 24.6 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 79.465 ಮೀ, ಗುರುಪುರ ನದಿ (ಅಡ್ಡೂರು) 2.7 ಮೀ ನೀರಿದೆ. ಗಾಳಿಯ ಚಲನೆಯು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ಸುಳ್ಯ, ಸಂಪಾಜೆ ಘಾಟಿಯ ಕೆಳಗಿನ ಪ್ರದೇಶಗಳಲ್ಲಿ ಮಳೆ ಹೆಚ್ಚಿರಬಹುದು.
ವಾಯುಭಾರ ಕುಸಿತ
ವಾಯುಭಾರ ಕುಸಿತವು ಗುಜರಾತ್ ತಲುಪಿದ್ದು, ಕರ್ನಾಟದ ಕರಾವಳಿ ದಕ್ಷಿಣ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಈ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದಂತೆ ಮುಂಗಾರು ದುರ್ಬಲಗೊಳ್ಳಲಿದೆ. ಆಗಸ್ಟ್ 4ರ ಸುಮಾರಿಗೆ ಮಧ್ಯಮ ಸ್ತರದಲ್ಲಿ ಶ್ರೀಲಂಕಾ ಪೂರ್ವ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿವೆ. ಪರಿಣಾಮ ಹಾಗೂ ಪರಿಸ್ಥಿತಿ ಕಾದು ನೋಡಬೇಕಾಗಿದೆ.