ಪಿಯು ಕಾಲೇಜಿಗೆ ಪಠ್ಯಪುಸ್ತಕ ಪೂರೈಕೆಗೂ ಗ್ರಹಣ

ಪಿಯು ಕಾಲೇಜಿಗೆ ಪಠ್ಯಪುಸ್ತಕ ಪೂರೈಕೆಗೂ ಗ್ರಹಣ

ಮಂಗಳೂರು: ಪಿಯುಸಿ ಕಾಲೇಜು ಆರಂಭಗೊಂಡು ಒಂದೂವರೆ ತಿಂಗಳು ಕಳೆಯುತ್ತಾ ಬಂದು ಮೊದಲ ಸೆಮಿಸ್ಚರ್ ಪರೀಕ್ಷೆ ಹತ್ತಿರ ಬಂದರೂ, ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪಠ್ಯ ಪುಸ್ತಕಗಳೇ ವಿತರಣೆ ಆಗಿಲ್ಲ. ಕಳೆದ ಬಾರಿ ರಾಜ್ಯ ಸರ್ಕಾರ ಉಚಿತವಾಗಿ ಪಠ್ಯ ಪುಸ್ತಕ ಕೊಡುತ್ತೇವೆ ಎಂದಿದ್ದರಿಂದ ಕಾಲೇಜಿನಲ್ಲಿ ಗೊಂದಲ ಮುಂದುವರಿದಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಅನುದಾನ ಕೊರತೆಯಿಂದ ಪುಸ್ತಕ ಅಚ್ಚು ಹಾಕಿಸುವುದಕ್ಕೇ ಮೀನ ಮೇಷ ಎಣಿಸುತ್ತಿದ್ದಾರೆ ಅನ್ನುವ ವಿದ್ಯಮಾನ ಬೆಳಕಿಗೆ ಬಂದಿದೆ. 

ಕಳೆದ ಬಾರಿ 2026-27ನೇ ಸಾಲಿನ ಬಜೆಟ್ ನಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ವಿದ್ಯಾ ವಿಕಾಸ್ ಯೋಜನೆಯನ್ನು ಪಿಯು ಕಾಲೇಜುಗಳಿಗೂ ವಿಸ್ತರಿಸಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೀಡುವುದಾಗಿ ಪ್ರಕಟಿಸಿದ್ದರು. ಸರ್ಕಾರಿ ಶಾಲೆಯಲ್ಲಿ ಒಂದನೇ ಕ್ಲಾಸಿನಿಂದ 10ನೇ ತರಗತಿ ವರೆಗೆ ಪಠ್ಯಪುಸ್ತಕ, ಶೂ, ಸಾಕ್ಸ್, ಯೂನಿಫಾರ್ಮ್ ಉಚಿತ ಕೊಡುವ ಯೋಜನೆ ಅಡಿಯಲ್ಲೇ ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕದ ಘೋಷಣೆ ಮಾಡಲಾಗಿತ್ತು. ಆದರೆ ಈ ಹೊರೆ ಇಲಾಖೆಗೆ ಹೊಸತಾಗಿದ್ದು, ಸುಮಾರು 28 ಲಕ್ಷ ಪಠ್ಯ ಪುಸ್ತಕ ಅಚ್ಚು ಹಾಕುವುದಕ್ಕೂ ಗೊಂದಲ ಉಂಟಾಗಿದೆ. 

ಅನುದಾನಿತ ಮತ್ತು ಖಾಸಗಿ ಕಾಲೇಜುಗಳಿಗೂ ಸರ್ಕಾರದಿಂದಲೇ ಪಠ್ಯಪುಸ್ತಕ ವಿತರಿಸುವ ಬಗ್ಗೆ ಸರ್ಕಾರ ಹೇಳಿದ್ದರಿಂದ ಇನ್ನೊಂದೆಡೆ ಮತ್ತಷ್ಟು ಪೀಕಲಾಟ. ಖಾಸಗಿ ಕಾಲೇಜುಗಳ ಆಡಳಿತದಿಂದ ಪಠ್ಯಪುಸ್ತಕ ವಿತರಣೆಗೆ ಮೊದಲೇ 25 ಶೇಕಡಾ ಹಣವನ್ನೂ ಇಲಾಖೆ ಅಧಿಕಾರಿಗಳು ಪಡೆದಿದ್ದಾರೆ. ಇದರಿಂದಾಗಿ ಈಗ ಖಾಸಗಿ ಕಾಲೇಜುಗಳ ಆಡಳಿತವೂ ಇಕ್ಕಟ್ಟಿಗೆ ಸಿಲುಕಿದೆ. ಇತ್ತ ಖಾಸಗಿ ಕಂಪನಿಗಳಿಂದ ಪಠ್ಯಪುಸ್ತಕ ಖರೀದಿಸಿ ವಿದ್ಯಾರ್ಥಿಗಳಿಗೆ ನೀಡುವುದಕ್ಕೂ ಅಲ್ಲ, ಬಿಡುವುದೂ ಅಲ್ಲ ಅನ್ನುವ ಸ್ಥಿತಿಯಾಗಿದೆ.

ಸರ್ಕಾರದಲ್ಲಿ ಯಾವುದಕ್ಕೆ ಹಣ ಇಲ್ಲದಿದ್ದರೂ ಶಿಕ್ಷಣದ ವಿಚಾರದಲ್ಲಿ ಅನುದಾನ ಕೊರತೆ ಮಾಡಬಾರದು. ಶೈಕ್ಷಣಿಕ ವರ್ಷ ಆರಂಭದ ಸಂದರ್ಭದಲ್ಲಿಯೇ ನಾಯಕತ್ವ ಬದಲಾಗಿದ್ದು, ಇದರಿಂದಾಗಿ ಅಧಿಕಾರಿಗಳ ವರ್ಗಾವರ್ಗಿ ಆಗಿರುವುದು, ಶಿಕ್ಷಣ ಇಲಾಖೆಗೆ ಸಚಿವರ ನೇಮಕವೂ ಆಗದಿರುವುದು ಎಡವಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಇಲಾಖೆಗೆ ಇದಕ್ಕೆಂದು ಅನುದಾನ ಬರದೇ ಪಠ್ಯ ಪುಸ್ತಕ ಅಚ್ಚು ಹಾಕುವುದಕ್ಕೂ ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಕಳೆದ ಮೇ 25ರಂದು ಪಿಯು ಕಾಲೇಜು ಆರಂಭವಾಗಿದ್ದರೂ ರಾಜ್ಯದಲ್ಲಿ ಈವರೆಗೆ ಶೇ.೫ರಷ್ಟು ಪಠ್ಯಪುಸ್ತಕ ಮಾತ್ರ ಪೂರೈಕೆಯಾಗಿದೆ. ಭಾಷಾ ಪಠ್ಯಗಳಂತೂ ಕಾಲೇಜಿನ ಬಾಗಿಲಿಗೆ ತಲುಪಿಯೇ ಇಲ್ವಂತೆ. 

ಉಪನ್ಯಾಸಕರ ಸಂಘದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 25 ಶೇಕಡದಷ್ಟು ಕಾಲೇಜುಗಳಿಗೂ ಪಠ್ಯಪುಸ್ತಕ ವಿತರಣೆ ಆಗಿಲ್ಲ. ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರು ತಮ್ಮ ಹಳೆಯ ಪಠ್ಯವನ್ನು ಮುಂದಿಟ್ಟು ಪಾಠ ಮಾಡುತ್ತ ನೋಟ್ಸ್ ಕೊಡುತ್ತಿದ್ದಾರಂತೆ. ಅಕೌಂಟ್ಸ್, ಹಿಸ್ಟರಿ, ಇಕನಾಮಿಕ್ಸ್, ಫಿಸಿಕ್ಸ್ ರೀತಿಯ ಸಬ್ಜೆಕ್ಟ್ ಗಳಲ್ಲಿ ನೋಟ್ಸ್ ಕೊಟ್ಟು ಸುಧಾರಿಸುತ್ತಿದ್ದಾರೆ. ಭಾಷೆಗಳ ವಿಚಾರಕ್ಕೆ ಬಂದರೆ ಪಠ್ಯ ಪುಸ್ತಕ ಇಲ್ಲದೆ ಬರೀ ನೋಟ್ಸ್ ಕೊಡುವುದು ಸರಿಯಾಗಲ್ಲ. ವಿದ್ಯಾರ್ಥಿಗಳನ್ನು ಪಠ್ಯಪುಸ್ತಕ ಮುಂದಿರಿಸಿಯೇ ಪಾಠ ಮಾಡಬೇಕಾಗುತ್ತದೆ. ಎಫ್‌ಎ-1 ಪರೀಕ್ಷೆಗೆ ಸಿದ್ಧತೆ ಆಗುತ್ತಿದ್ದು, ನಾವು ಪಠ್ಯವನ್ನು ಮುಗಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದೇವೆ ಎಂದು ಒಬ್ಬರು ಅಳಲು ಹೇಳಿಕೊಂಡಿದ್ದಾರೆ.

ವಿಶೇಷ ಎಂದರೆ ಖಾಸಗಿಯಾಗಿ ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಹೀಗಾಗಿ ಕೆಲವು ವಿದ್ಯಾರ್ಥಿಗಳು ತಾವಾಗಿಯೇ ಪಠ್ಯಪುಸ್ತಕ ಖರೀದಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರಿ ಪಿಯು ಕಾಲೇಜಿನಲ್ಲಿ ಈ ಸಲ ಪ್ರವೇಶ ಪಡೆದಿದ್ದಾರೆ. ಇವರಿಗೆ ಅಂದಾಜು 1.50 ಲಕ್ಷದಷ್ಟು ಪಠ್ಯಪುಸ್ತಕ ಬೇಕಾಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಸಾವಿರದಷ್ಟೂ ಪಠ್ಯಪುಸ್ತಕ ಪೂರೈಕೆ ಆಗಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article