ರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರು ಮೌನ ಯಾಕೆ: ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಪ್ರಶ್ನೆ
ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತ್ರೇತಾಯುಗ, ದ್ವಾಪರ ಯುಗಗಳ ಆಧಾರ ನೋಡಿದರೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ ರಾಮಾಯಣ ಆಗಿತ್ತು. ರಾಮ- ಭರತನ ಸಂಭಾಷಣೆಯಲ್ಲಿ ರಾಜ್ಯಭಾರ ಹೇಗಿರಬೇಕು, ಹೇಗಿರಬಾರದು ಅನ್ನುವುದನ್ನು ಕಟ್ಟಿಕೊಡಲಾಗಿದೆ. ಯಾವ ದೇಶದಲ್ಲಿ ಭ್ರಷ್ಟಾಚಾರ ಇರುತ್ತದೋ ಆ ದೇಶ ಉದ್ಧಾರ ಆಗಲ್ಲ ಎಂದು ರಾಮ ಹೇಳುತ್ತಾನೆ. ಹಲವಾರು ಕಾರಣಕ್ಕೆ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ನಾವು ಕರೆಯುತ್ತೇವೆ.
ಶ್ರೀರಾಮಚಂದ್ರನೇ ಈ ದೇಶದ ಅಸ್ಮಿತೆ. ಆದರೆ ರಾಮನದ್ದೇ ಆದರ್ಶ ಎನ್ನುತ್ತಾ ಅದೇ ಹೆಸರಲ್ಲಿ ರಾಜಕೀಯ ಮಾಡಿಕೊಂಡು ಬಂದವರು ಈಗ ರಾಮನ ದೇಗುಲದ ಹೆಸರಲ್ಲಿ ದುಡ್ಡು ಹೊಡೆದಿದ್ದಾರೆ. ಆರೆಸ್ಸೆಸ್, ವಿಶ್ವ ಹಿಂದು ಪರಿಷತ್, ಬಿಜೆಪಿ ಮತ್ತು ಪ್ರಧಾನಿ ಮೋದಿಯವರೇ ಸೇರಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚಿಸಿದ್ದರು. ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಪ್ರಶಾಂತ ಲೇಖಂಡೆ, ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್, ಪ್ರಧಾನಿ ಮೋದಿಯವರ ಮಾಜಿ ಸೆಕ್ರಟರಿ ನೃಪೇಂದ್ರ ಮಿಶ್ರಾ ಅವರೆಲ್ಲ ಟ್ರಸ್ಟ್ ಸದಸ್ಯರಿದ್ದಾರೆ.
ರಥಯಾತ್ರೆ ಸೇರಿದಂತೆ ಇಡೀ ದೇಶಾದ್ಯಂತ ಅಭಿಯಾನ ನಡೆಸಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿದ್ದನ್ನು ಇವರೆಲ್ಲ ಸೇರಿ ಲೂಟಿ ಹೊಡೆದಿದ್ದಾರೆ. ಕರ್ನಾಟಕದಲ್ಲಿ ಪ್ರಚಾರಕ್ ಆಗಿದ್ದ ಗೋಪಾಲ ರಾವ್ ಎಂಬವರಿಗೂ ಈ ಲೂಟಿಯಲ್ಲಿ ಪಾಲಿದೆ ಎನ್ನುವ ಮಾಹಿತಿ ಇದೆ. ಇಷ್ಟೆಲ್ಲ ಆಗುತ್ತಿರಬೇಕಾದರೆ ಪ್ರಧಾನಿ ಮೋದಿ ಮೌನವಾಗಿರೋದ್ರ ಅರ್ಥವೇನು..? ಯಾಕೆ ಅವರೀಗ ಮೌನಿ ಬಾಬಾ ಆಗಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಸಚಿವರಾಗಿದ್ದಾಗ ರೈಲು ಅಪಘಾತ ಆಗಿದ್ದಕ್ಕೆ ಹೊಣೆ ಹೊತ್ತು ರಾಜಿನಾಮೆ ನೀಡಿದ್ದರು. ಇವರೇ ನೇಮಿಸಿದ ಟ್ರಸ್ಟ್ ನವರೇ ಲೂಟಿ ಹೊಡೆದಿದ್ದರಿಂದ ಪ್ರಧಾನಿ ಮೋದಿ, ಸಿಎಂ ಯೋಗಿ, ಗೃಹ ಸಚಿವ ಅಮಿತ್ ಷಾ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಿತ್ತು ಎಂದರು.
ಮೀಸಲಾತಿ..
ಎಸ್ ಸಿ ಮತ್ತು ಎಸ್ ಟಿ ಪಂಗಡದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಮಾಡಿ 2022ರಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವಿದ್ದಾಗ ರಚಿಸಲಾದ ಕಾಯಿದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರ್ಪಡೆಗೊಳಿಸಬೇಕು. ಕಾಯಿದೆಯ ವಿರುದ್ದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದ ಸಮಸ್ಯೆಯಾಗಿದೆ. ಒಂದು ವೇಳೆ 9ನೇ ಅನುಸೂಚಿಗೆ ಸೇರ್ಪಡೆಗೊಳಿಸಿದರೆ ಇಂತಹ ಸಮಸ್ಯೆ ಉಂಟಾಗುವುದಿಲ್ಲ. 9ನೇ ಅನುಸೂಚಿಗೆ ಸೇರಿಸುವಂತೆ 2023ರಲ್ಲಿಯೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿತ್ತು. ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೂ ಕೇಂದ್ರ ಸರ್ಕಾರ ಕ್ರಮ ಜರುಗಿಸಿಲ್ಲ. ರಾಜ್ಯ ಸರ್ಕಾರ ಸರ್ವ ಪಕ್ಷ ನಿಯೋಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಕೊಂಡೊಯ್ದು ಕಾಯಿದೆಯನ್ನು 9ನೇ ಅನುಸೂಚಿಗೆ ಸೇರಿಸುವಂತೆ ಒತ್ತಡ ಹೇರಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹನುಮಂತರಾಯಪ್ಪ, ನರಸಿಂಹಯ್ಯ, ದಿನೇಶ್ ಮೂಳೂರು, ಪ್ರೇಮ್ ಬಲ್ಲಾಳ್‌ಭಾಗ್ ಮತ್ತಿತರರು ಉಪಸ್ಥಿತರಿದ್ದರು.