ಶಾಂತಿ ಧೈರ್ಯ ಪಡೆಯಲು ಆಧ್ಯಾತ್ಮಿಕ ಸಾಧನೆ ಹಾಗೂ ಧರ್ಮಾಚರಣೆ ಅತ್ಯಗತ್ಯ: ಡಾ. ಪ್ರಣವ್ ಮಲ್ಯ
ಅವರು ಇಂದು ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಕೂಟಕ್ಕಳ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮೆಯಲ್ಲಿ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘರ್ಷ ಮತ್ತು ಸಾಧನೆಯ ದಿಶೆ’ ಎಂಬ ವಿಷಯದ ಕುರಿತು ಮಾತನಾಡಿದರು.
ಹಿಂದೂ ಸಮಾಜವು ತನ್ನ ಧರ್ಮ-ಸಂಸ್ಕೃತಿಯ ಜ್ಞಾನವಾದ ‘ಸ್ವಬೋಧ’ವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಲವ್ ಜಿಹಾದ್, ಮತಾಂತರ ಹಾಗೂ ವೈಚಾರಿಕ ಆಘಾತಗಳಂತಹ ಷಡ್ಯಂತ್ರಗಳ ಕುರಿತು ‘ಶತ್ರುಬೋಧ’ವನ್ನು ಜಾಗೃತವಾಗಿಟ್ಟುಕೊಂಡು ಸಂಘಟಿತರಾಗಬೇಕಿದೆ. ಧರ್ಮಶಿಕ್ಷಣವನ್ನು ಪಡೆದು ಧರ್ಮರಕ್ಷಣೆಯಲ್ಲಿ ಸಕ್ರಿಯರಾಗುವುದು, ಪ್ರಥಮ ಚಿಕಿತ್ಸೆ ಹಾಗೂ ಸ್ವರಕ್ಷಣೆಯಂತಹ ಆಪತ್ಕಾಲೀನ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಮತ್ತು ದಿನನಿತ್ಯ ಕುಲದೇವತೆ-ದತ್ತರ ನಾಮಜಪ ಹಾಗೂ ಸ್ತೋತ್ರ ಪಠಣದ ಮೂಲಕ ರಾಷ್ಟ್ರ ಮತ್ತು ಧರ್ಮ ಸೇವೆಗೆ ಸಮರ್ಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
‘ಗುರು-ಶಿಷ್ಯ ಪರಂಪರೆಯು ಭಾರತೀಯ ಸಂಸ್ಕೃತಿ, ಜ್ಞಾನ ಮತ್ತು ಅಧ್ಯಾತ್ಮದ ಅತ್ಯಂತ ಪವಿತ್ರ ಹಾಗೂ ಪ್ರಾಚೀನ ಪರಂಪರೆಯಾಗಿದೆ. ತುಳುನಾಡಿನ ನಾಥ ಪರಂಪರೆಯ ಮತ್ಸ್ಯೇಂದ್ರನಾಥ ಮತ್ತು ಗೋರಖನಾಥರ ಬಾಂಧವ್ಯವು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಗುರುತತ್ತ್ವ ಎಂಬುದು ಕೇವಲ ಒಬ್ಬ ವ್ಯಕ್ತಿ ಅಥವಾ ದೇಹಕ್ಕೆ ಸೀಮಿತವಾಗಿರದೆ, ಅದೊಂದು ಸನಾತನ ಚೈತನ್ಯ ಶಕ್ತಿಯಾಗಿದೆ. ಈ ಗುರುತತ್ತ್ವವನ್ನು ನಮ್ಮತ್ತ ಆಕರ್ಷಿಸಲು ಮತ್ತು ಗುರುಕೃಪೆ ಪಡೆಯಲು ಪ್ರತಿಯೊಬ್ಬರೂ ಜಪ-ಸಾಧನೆಯನ್ನು ಮಾಡಬೇಕು. ಗುರುವಿನ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದು ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹೇಳಿದರು.
ಹಿಂದೂ ಮಹಾಸಭಾದ ಅಧ್ಯಕ್ಷ ಲೋಹಿತ್ ಸುವರ್ಣ, ಹಿಂದೂ ಸೇವಾ ಸಮಿತಿ ಜಪ್ಪಿನಮೊಗರು ಇದರ ಅಧ್ಯಕ್ಷ ಯೋಗೀಶ್ ರೈ, ಶಾಸಕ ವೇದವ್ಯಾಸ ಕಾಮತ್, ಜಪ್ಪಿನಮೊಗರಿನ ಮಾಜಿ ಕಾರ್ಪೊರೇಟರ್ ಸುರೇಂದ್ರ, ಬಜಾಲ್ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥ ರಾಮಚಂದ್ರ ಆಳ್ವ, ವಕೀಲ ಸುಜಯ್ ಶೆಟ್ಟಿ, ಸುರತ್ಕಲ್ ಸಾರ್ವಜನಿಕ ಶಾರದಾ ಮಹೋತ್ಸವದ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.