'ಪಿಎಂ ರಾಹತ್’ ರಾಜ್ಯದಲ್ಲಿ ವ್ಯವಸ್ಥಿತವಾಗಿ ಜಾರಿಗೆ ಚಿಂತನೆ: ಯು.ಟಿ. ಖಾದರ್
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ರಸ್ತೆ ಅಪಘಾತದ ಸಂದರ್ಭ ರೋಗಿಗಳಿಗೆ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ನೆಪಗಳನ್ನು ಒಡ್ಡದೆ ಕ್ಷಿಪ್ರವಾಗಿ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ 2014-15ನೆ ಸಾಲಿನಲ್ಲಿ ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಅದನ್ನು ಪರಿಗಣಿಸಿ ಕೇಂದ್ರ ಸರಕಾರ ಹೊಸತಾಗಿ ಪಿಎಂ ರಾಹತ್ ಯೋಜನೆ ದೇಶದಲ್ಲೆಡೆ ಜಾರಿಗೆ ತಂದಿದೆ. ಆದರೆ ತಾಂತ್ರಿಕ ಕಾರಣದಿಂದ ಇನ್ನೂ ಈ ಯೋಜನೆ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಂಡಿಲ್ಲ.
ಈ ಯೋಜನೆ ಅತ್ಯಂತ ಉಪಯುಕ್ತ ಆಗಿರುವ ಕಾರಣ ಪಿಎಂ ರಾಹತ್ ಯೋಜನೆಯಡಿ ತುರ್ತು ಚಿಕಿತ್ಸೆಗಾಗಿ ನೀಡಲಾಗುವ 1.50 ಲಕ್ಷ ರೂ. ಜತೆ ರಾಜ್ಯ ಸರಕಾರದಿಂದ 1 ಲಕ್ಷ ರೂ. ಒದಗಿಸಿ ಒಟ್ಟು 2.5 ಲಕ್ಷ ರೂ.ಗಳವರೆಗೆ ಯೋಜನೆಯಡಿ ಚಿಕಿತ್ಸೆ ದೊರೆಯುವಂತೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕೆಯನ್ನು ಮಕ್ಕಳಿಗೆ ನೀಡುವುದನ್ನು ಕಡ್ಡಾಯಗೊಳಿಸಲಾಗದು. ತಮ್ಮ ಮಕ್ಕಳಿಗೆ ಅದನ್ನು ಕೊಡಿಸಬೇಕೋ, ಬೇಡವೇ ಎಂಬುದರ ಬಗ್ಗೆ ಮಕ್ಕಳ ಪೋಷಕರು ಅಥವಾ ಹೆತ್ತವರು ನಿರ್ಧರಿಸಬೇಕು. ಈ ಕುರಿತಂತೆ ಪ್ರತಿ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಕ್ಕಾಗಿ ಪ್ರತಿ ಶಾಲೆಗಳಿಗೂ ಭೇಟಿ ನೀಡಲಾಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಸೇವೆ ನೀಡಲು ಒಪ್ಪಂದ ಮಾಡಿಕೊಂಡ ಖಾಸಗಿ ವೈದ್ಯಕೀಯ ಕಾಲೇಜು ಅಥವಾ ಆಸ್ಪತ್ರೆಗಳವರು ನಿಗದಿತ ಸಮಯದಲ್ಲಿ ಅನುಷ್ಟಾನಕ್ಕೆ ಮುಂದಾಗದಿದ್ದರೆ ಅವರ ಒಪ್ಪಂದ (ಎಂಒಯು) ರದ್ದು ಪಡಿಸಲಾಗುತ್ತದೆ. ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಅದರ ಪ್ರಕಾರ ಕ್ರಮ ವಹಿಸಬೇಕು ಎಂದು ಖಾದರ್ ಹೇಳಿದರು.
ವೆನ್‌ಲಾಕ್‌ನಲ್ಲಿ ಸುಸಜ್ಜಿತ ಒಪಿಡಿ ನಿರ್ಮಾಣಕ್ಕೆ ಸಂಬಂಧಿಸಿ ಏನೇ ಆಕ್ಷೇಪ, ಸಮಸ್ಯೆ ಇದ್ದರೂ ಅದನ್ನು ಲಿಖಿತ ರೂಪದಲ್ಲಿ ಸರಕಾರದ ಗಮನಕ್ಕೆ ತರಬಹುದು. ಜನರಿಗೆ ಪ್ರಯೋಜನ ಆಗುವುದಿದ್ದರೆ ಯಾವುದೇ ರೀತಿಯ ಬದಲಾವಣೆಗೆ ಸೂಚನೆ ನೀಡಲಾಗುವುದು. ರಾಜ್ಯ ಸರಕಾರ ಹಾಗೂ ಕೆಎಂಸಿ ಸೇರಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಒಪಿಡಿ (ಹೊರರೋಗಿಗಳ ವಿಭಾಗ) ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದರು.