ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಮಾಹಿತಿ ನೀಡಿದ ಭಾರತೀಯನ ಮೇಲೆಯೇ ಎಫ್‌ಐಆರ್: ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಹೈಕೋರ್ಟ್‌ನ ಖಡಕ್ ಎಚ್ಚರಿಕೆ: ಅರುಣ್ ಜಿ. ಶೇಟ್
ಮಂಗಳೂರು: ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾನೆಂದು ಆರೋಪಿಸಲಾದ ಬಾಂಗ್ಲಾದೇಶದ ಪ್ರಜೆಗಳ ಕುರಿತು ಸಂಬಂಧಿತ ದಾಖಲೆಗಳೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ ಸಾಮಾಜಿಕ ಕಾರ್ಯಕರ್ತ ಡಾ. ಟಿ. ನಾಗೇಂದ್ರಪ್ಪ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಿ ಬಂಧಿಸಿರುವ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಬಯಲಿಗೆಳೆದಿದೆ ಎಂದು ದ.ಕ. ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಪೊಲೀಸ್ ಇಲಾಖೆಯ ಕ್ರಮದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿರುವುದರ ಜೊತೆಗೆ, ಅಕ್ರಮ ವಲಸೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರ ಎಚ್ಚರಿಕೆಯಿಂದ ಹಾಗೂ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಬೇಕೆಂಬ ಸಂದೇಶ ನೀಡಿದ್ದಾರೆ ಎಂದು ವರದಿಯಾಗಿದೆ.
ಅಕ್ರಮ ವಲಸಿಗರ ವಿರುದ್ಧ ಕಾನೂನುಬದ್ಧ ಮಾಹಿತಿ ನೀಡುವ ಭಾರತೀಯ ನಾಗರಿಕರನ್ನೇ ಪ್ರಕರಣಗಳಲ್ಲಿ ಸಿಲುಕಿಸುವುದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಮುಂದುವರಿಯದಂತೆ ರಾಜ್ಯ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಂಡು, ಅಕ್ರಮ ವಲಸೆಯ ವಿರುದ್ಧ ಕಠಿಣ ನಿಲುವು ತಾಳಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಆಗ್ರಹಿಸುತ್ತದೆ ಎಂದು ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.