‘ಆರೋಗ್ಯಕ್ಕಾಗಿ ಮುದ್ರೆಗಳು’ ಪುಸ್ತಕ ಬಿಡುಗಡೆ

‘ಆರೋಗ್ಯಕ್ಕಾಗಿ ಮುದ್ರೆಗಳು’ ಪುಸ್ತಕ ಬಿಡುಗಡೆ


ಮಂಗಳೂರು: ದೇಲಂಪಾಡಿ ಯೋಗ ಪ್ರತಿಷ್ಠಾನ ವತಿಯಿಂದ ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ ಅವರು ಬರೆದ ‘ಆರೋಗ್ಯಕ್ಕಾಗಿ ಮುದ್ರೆಗಳು’ ಪುಸ್ತಕವನ್ನು ಉಂದು ಅಮೃತ ಭವನದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ಬಿಡುಗಡೆಗೊಳಿಸಿದರು.

ಬಳಿಕ ಅವರು ಮಾತನಾಡಿ, ಭಾರತೀಯ ಋಷಿ ಪರಂಪರೆಯ ಯೋಗ ಮತ್ತು ಮುದ್ರೆಗಳು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ವೃದ್ಧಿಸುವ ಅಮೂಲ್ಯ ಸಾಧನಗಳಾಗಿದ್ದು, ಇವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯಕರ ಹಾಗೂ ಸಮತೋಲನಯುತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರಿನ ಎಸ್‌ಸಿಎಸ್ ಆಸ್ಪತ್ರೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ. ಜೀವರಾಜ್ ಸೊರಕೆ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಯೋಗ, ಮುದ್ರೆಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು.

ಯೋಗಗುರು ಹಾಗೂ ಪುಸ್ತಕದ ಲೇಖಕ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ‘ಯೋಗ, ಮುದ್ರೆಗಳು ಮತ್ತು ಆರೋಗ್ಯಕರ ಜೀವನಶೈಲಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ವಿವಿಧ ಮುದ್ರೆಗಳ ಮಹತ್ವ, ಅವುಗಳ ಆರೋಗ್ಯ ಪ್ರಯೋಜನಗಳು ಹಾಗೂ ದೈನಂದಿನ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ವಿಧಾನಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರ್.ಎನ್.ಎಸ್. ತಾಂತ್ರಿಕ ವಿದ್ಯಾಲಯದ ಪ್ರಾಧ್ಯಾಪಕ ಡಾ. ಸುರೇಶ್ ದೇಲಂಪಾಡಿ, ಮಂಗಳೂರಿನ ಮಧುಬನ್ ಗ್ರಾಫಿಕ್ಸ್‌ನ ಮಾಲಕ ಪ್ರಸನ್ನ ಕೆ., ಗೋಪಾಲಕೃಷ್ಣ ದೇಲಂಪಾಡಿ ಅವರ ಪತ್ನಿ ವೀಣಾ ದೇಲಂಪಾಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯೋಗಾಭ್ಯಾಸಿಗಳು, ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ದೇಲಂಪಾಡಿ ಯೋಗ ಪ್ರತಿಷ್ಠಾನ ಹಾಗೂ ಶಿಷ್ಯವೃಂದದ ಸದಸ್ಯರು ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article