ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಾಗ ಇನ್ನಷ್ಟು ಸಾಧನೆ ಮಾಡಲು ಪೂರಕ: ಡಾ. ಎಂ.ಎನ್. ರಾಜೇಂದ್ರ ಕುಮಾರ್

ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಾಗ ಇನ್ನಷ್ಟು ಸಾಧನೆ ಮಾಡಲು ಪೂರಕ: ಡಾ. ಎಂ.ಎನ್. ರಾಜೇಂದ್ರ ಕುಮಾರ್


ಮಂಗಳೂರು: ಕಲಿಕೆಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ದೃಷ್ಟಿಯಿಂದ ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ 2008ರಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಾಗ ಇನ್ನಷ್ಟು ಸಾಧನೆ, ಶಿಕ್ಷಣ ಪಡೆಯುವ ಮನೋಭಾವ ಮೂಡಿಸುತ್ತದೆ. ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ‘ಸಹಕಾರಿ ಪಿತಾಮಹ’ ದಿ. ಮೊಳಹಳ್ಳಿ ಶಿವರಾವ್ ಸ್ಮರಣಾರ್ಥವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ 2025-2026ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯಽಕ ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ಯಾಂಕಿನ ಸಿಬ್ಬಂದಿಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ವಿತರಣೆ  ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್ ವತಿಯಿಂದ ಇಂತಹಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಲ್ಲ. ನವೋದಯ ಸ್ವಸಹಾಯ ಸಂಘಗಳಲ್ಲಿ ಶೇ.90ರಷ್ಟು ಮಂದಿ ಮಹಿಳಾ ಸದಸ್ಯರಿದ್ದು, ಶೇ. 98.5ರಷ್ಟು ಸಾಲ ಮರುಪಾವತಿ ಆಗುತ್ತಿದೆ. ಗ್ರಾಮಾಂತರ ಪ್ರದೇಶದ ಮಹಿಳೆಯರೂ ಬೆಳೆಯಬೇಕು ಎಂಬ ದೃಷ್ಟಿಯಿಂದ ಎಲ್ಲರೂ ಸೇರಿ ಪ್ರತಿಭಾ ಪುರಸ್ಕಾರ ನಡೆಸುತ್ತಿದ್ದೇವೆ ಎಂದರು.

ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆದು ದೊಡ್ಡ ದೊಡ್ಡ ಹುದ್ದೆ ಹೊಂದಿ ದೇಶ ಕಟ್ಟುವ ಕೆಲಸ ಮಾಡಬೇಕು, ಒಳ್ಳೆಯ ಹೆಸರು ಗಳಿಸಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಿದ ಬಳಿಕ ಕನಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದರೆ ಅದು ನಮಗೆ ತೃಪ್ತಿ ನೀಡುತ್ತದೆ ಎಂದರು.

ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಮಾಜಿ ಸಚಿವ, ವಿಕಾಸ್ ಎಜ್ಯುಕೇಶನ್ ಟ್ರಸ್ಟ್ ಸಂಸ್ಥಾಪಕ ಕೃಷ್ಣ ಜೆ.ಪಾಲೆಮಾರ್, ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನೀಡಿದ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಅವರು ದೇಶದ ಸಂಪತ್ತಾಗಿ ಬೆಳೆಯಬೇಕು. ಪ್ರತಿಭಾ ಪುರಸ್ಕಾರ ಉಳಿದ ಮಕ್ಕಳಿಗೆ ಪ್ರೇರಣೆಯಾಗಿದೆ. ಮೊಳಹಳ್ಳಿ ಶಿವರಾವ್ ಅವರನ್ನು ಮೀರಿಸುವ ವ್ಯಕ್ತಿತ್ವ, ಕೆಲಸ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಂದ ಆಗಿದೆ. ಸಹಕಾರ ರಂಗವನ್ನು ಹೇಗೆ ಕಟ್ಟಿ ಬೆಳೆಸಬೇಕು ಎಂಬುದನ್ನು ಡಾ. ಎಂಎನ್‌ಆರ್ ಅವರು ತೋರಿಸಿಕೊಟ್ಟಿದ್ದಾರೆ ಎಂದರು.

ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ದೇಶದಲ್ಲಿ ಮಾದರಿ ವ್ಯವಸ್ಥೆಯನ್ನು ಡಾ.ಎಂ.ಎನ್. ರಾಜೇಂದ್ರಕುಮಾರ್ ಜಾರಿ ಮಾಡಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಸಾಲ ಮಾತ್ರಲವಲ್ಲದೆ ವೈವಿಧ್ಯಮಯ ಸವಲತ್ತು ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಜ್ಯ ಮೆಚ್ಚುವ ಕೆಲಸ ಮಾಡಿದ್ದಾರೆ. ಮೂರು ಲಕ್ಷ ನವೋದಯ ಗುಂಪುಗಳ ಮೂಲಕ ೧೫ ಲಕ್ಷಕ್ಕೂ ಹೆಚ್ಚು ಜನರಿಗೆ ನೆರವಾಗಿರುವುದು ಜಗತ್ಪ್ರಸಿದ್ದ ಕಾರ್ಯ. ಆಮೂಲಕ ಅವರು ಅವಿಭಜಿತ ದ.ಕ. ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಅವರು ಹೇಳಿದರು.

ಎಸ್ ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಎಂ. ವಾದಿರಾಜ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಯೊಟ್ಟು, ದೇವಿಪ್ರಸಾದ್ ಶೆಟ್ಟಿ ಬೆಳಪು, ಎಸ್.ಬಿ.ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಎಂ. ಮಹೇಶ್ ಹೆಗ್ಡೆ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಎಸ್.ಎನ್.ಮನ್ಮಥ, ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಹೆಚ್.ಎನ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಸಿಇಓ ಪ್ರವೀಣ್ ನಾಯಕ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರಘು, ಎಸ್‌ಸಿಡಿಸಿಸಿ ಬ್ಯಾಂಕ್ ಮಹಾಪ್ರಬಂಧಕ ಸುನೀಲ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು.

ಸನ್ಮಾನ: ಎಸ್‌ಸಿಡಿಸಿಸಿ ಬ್ಯಾಂಕ್ ಜನತಾ ಬಜಾರ್ ಶಾಖೆಯ ಮೆನೇಜರ್ ದೀಪಕ್ ಅವರ ಪುತ್ರ ಕನಿಶ್ ಡಿ.ಕೋಟ್ಯಾನ್ ಕ್ರೀಡಾ ಕ್ಷೇತ್ರದಲ್ಲಿ ಗೈದ ಸಾಧನೆಗೆ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಿಬ್ಬಂದಿ ಚಂದ್ರಶೇಖರ ಅವರ ಪುತ್ರಿ ಶ್ರೀಜಾ ಸಿ. ಕೋಟ್ಯಾನ್ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಹಾಗೂ ಯೋಗದಲ್ಲಿ ಅಪೂರ್ವ ಸಾಧನೆ ಗೈದಿರುವ ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು.

ಪುರಸ್ಕಾರ: 2025-2026ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ಸಾಧನೆಗೈದ( ಒಟ್ಟು 34 ಮಂದಿ) ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ಯಾಂಕಿನ 116 ಸಿಬ್ಬಂದಿಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ವಿತರಣೆ ಹಾಗೂ ನವೋದಯ ಸ್ವಸಹಾಯ ಸಂಘಗಳ 161 ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.

ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಸ್ವಾಗತಿಸಿದರು, ಸಹಾಯಕ ಮಹಾಪ್ರಬಂಧಕ ರಾಜೇಶ್ ಶೆಟ್ಟಿ ವಂದಿಸಿ, ಸಿಬ್ಬಂದಿ ರಾಜೀವ್ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article