ಕರಾವಳಿಯ ಅತಿಥ್ಯ ಆರೋಗ್ಯ ಕ್ಷೇತ್ರಕ್ಕೆ ಪೂರಕ: ಡಾ. ಕೆ. ಶರತ್ ರಾವ್
ಅವರು ನಗರದಲ್ಲಿ ಇಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮಂಗಳೂರು ವಲಯದ ವತಿಯಿಂದ ಸಿಐಐ ಮಂಗಳೂರು ಆರೋಗ್ಯ ಶೃಂಗಸಭೆ 2026 ಪ್ರಥಮ ಆವೃತ್ತಿ ಕಾರ್ಯಕ್ರಮಲ್ಲಿ ‘ಕರಾವಳಿ ಕರ್ನಾಟಕವನ್ನು ಜಾಗತಿಕ ಆರೋಗ್ಯ ಸೇವಾ ಗಮ್ಯಸ್ಥಾನವಾಗಿ ಮುಂದುವರಿಸುವುದು’ ಎಂಬ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ಕರಾವಳಿ ಕರ್ನಾಟಕವನ್ನು ಜಾಗತಿಕ ಆರೋಗ್ಯ ಸೇವಾ ಗಮ್ಯಸ್ಥಾನವಾಗಿ ಮುಂದುವರಿಸುವ ವಿಚಾರದಲ್ಲಿ ಬಹಳ ಮುಖ್ಯವಾಗಿ ವೈದ್ಯರು, ಆಸ್ಪತ್ರೆ, ಚಿಕಿತ್ಸೆಯ ಮೇಲೆ ವಿಶ್ವಾಸ, ನಂಬಿಕೆಯನ್ನು ಆಧಾರವಾಗಿಟ್ಟುಕೊಂಡೇ ನಡೆಯಬೇಕಿದೆ. ಕ್ಲಿನಿಕಲ್ ರಿಸರ್ಚ್ಗಳನ್ನು ಹೆಚ್ಚು ಮಾಡುತ್ತಾ ರೋಗಿಗಳಲ್ಲಿ ಹೆಚ್ಚು ವಿಶ್ವಾಸರ್ಹತೆಯನ್ನು ಮೂಡಿಸುತ್ತಾ ಹೆಜ್ಜೆ ಇಟ್ಟಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಅದರಲ್ಲೂ ಜಾಗತಿಕ ವೈದ್ಯಕೀಯ ಕ್ಷೇತ್ರವನ್ನು ಸೆಳೆಯುವಲ್ಲಿ ಕರಾವಳಿಯ ಶುದ್ಧ ಗಾಳಿ, ಸಂಚಾರ ದಟ್ಟಣೆ ರಹಿತ ಪರಿಸರದ ಜತೆಗೆ ಆತಿಥ್ಯ ಮನೋಭಾವ ಪ್ರಮುಖ ಅಂಶವಾಗಿದೆ. ಕರಾವಳಿ ಭಾಗದಲ್ಲಿ ಎರಡು ಸಾವಿರ ಮಂದಿ ವಿದ್ಯಾರ್ಥಿಗಳು ಪ್ರತಿ ವರ್ಷ ವೈದ್ಯಕೀಯ ಶಿಕ್ಷಣ ಪೂರೈಸಿ ಹೊರ ಬರುತ್ತಿದ್ದಾರೆ. ಇದರಲ್ಲಿ 700-800 ಮಂದಿ ವಿಶೇಷ ತಜ್ಞರಾಗಿರುತ್ತಾರೆ. 200ರಷ್ಟು ಮಂದಿ ಕೆಲವೊಂದು ವಿಚಾರದಲ್ಲಿ ಮತ್ತಷ್ಟು ಹೆಚ್ಚು ಪರಿಣತಿಯನ್ನು ಪಡೆದವರು ಹೊರಬರುತ್ತಿದ್ದಾರೆ. ವಿಶ್ವದ ಯಾವುದೇ ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದ ವೈದ್ಯಕೀಯ ತಜ್ಞರು ಕಾಣಲು ಸಿಗುವುದು ಅಪರೂಪ ಎಂದವರು ವಿಶ್ಲೇಷಿಸಿದರು.
ಸಿಐಐ ಕರ್ನಾಟಕ ಆರೋಗ್ಯ ಕಾರ್ಯಪಡೆ ಸಂಚಾಲಕ ಹಾಗೂ ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವಿಜಯ್ ಭಾಸ್ಕರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಮೆಟ್ರೋ ನಗರಕ್ಕಿಂತ ಹೆಚ್ಚಾಗಿ ಟಿಯರ್-2 ನಗರಗಳಲ್ಲಿ ಒಂದಾದ ಮಂಗಳೂರಿನಲ್ಲಿ ವಿಶ್ವದರ್ಜೆ ಮಟ್ಟದ ಆರೋಗ್ಯ ಸೇವೆಯನ್ನು ವಿಸ್ತರಣೆಗೆ ಹೆಚ್ಚಿನ ಅವಕಾಶವಿದೆ. ಮುಖ್ಯವಾಗಿ ಸಂಪರ್ಕದ ಜತೆಗೆ ಬೇಕಾಗಿರುವ ಮೂಲಭೂತ ಸವಲತ್ತುಗಳ ಲಭ್ಯತೆಯ ವಿಚಾರದಲ್ಲಿ ಮಂಗಳೂರು ಹಿಂದೆ ಉಳಿದಿಲ್ಲ. ಆದರೆ ಇವುಗಳನ್ನು ಸಮಾಜ, ಮಾಧ್ಯಮಗಳ ಮುಂದೆ ಬ್ರಾಂಡ್ ರೂಪದಲ್ಲಿ ಪ್ರಚಾರಗೊಳಿಸುವ ಅಗತ್ಯತೆ ಸೃಷ್ಟಿಯಾಗಬೇಕಿದೆ ಎಂದರು. ಅಸೋಸಿಯೇಶನ್ ಆಫ್ ಹೆಲ್ತ್ಕೇರ್ ಪ್ರೊವೈಡರ್ಸ್ ಇಂಡಿಯಾ ಅಧ್ಯಕ್ಷ ಅಲೆಕ್ಸಾಂಡರ್ ಥಾಮಸ್ ಮಾತನಾಡಿದರು.
ಸಿಐಐ ಮಂಗಳೂರು ವಲಯ ಚೇರ್ಮನ್ ಅಭಿನವ್ ಬನ್ಸಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಐ ಮಂಗಳೂರು ವಲಯ ಉಪಾಧ್ಯಕ್ಷ ಸಿಎ ಅನಂತೇಶ್ ಪ್ರಭು ವಂದಿಸಿದರು. ಡಾ. ರೂಪಶ್ರೀ ಶೆಣೈ ಕಾರ್ಯಕ್ರಮ ನಿರೂಪಿಸಿದರು.