ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆ: ಮುಂದಿನ ದಿನಗಳಲ್ಲಿ ಕ್ಯಾಂಪ್ಕೋ ಜಾಗತಿಕ ಬ್ರ್ಯಾಂಡ್

ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆ: ಮುಂದಿನ ದಿನಗಳಲ್ಲಿ ಕ್ಯಾಂಪ್ಕೋ ಜಾಗತಿಕ ಬ್ರ್ಯಾಂಡ್


ಮಂಗಳೂರು: ಕ್ಯಾಂಪ್ಕೋ ಸ್ಥಾಪಕ ವಾರಣಾಸಿ ಸುಬ್ರಾಯ ಭಟ್ ಜನ್ಮಶತಮಾನೋತ್ಸವ ಸಂದರ್ಭ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ 53ನೇ ‘ಸ್ಥಾಪನಾ ದಿನಾಚರಣೆ’ ಶನಿವಾರ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದದ್ದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಗುಣಮಟ್ಟ ಹಾಗೂ ರಾಸಾಯನಿಕ ರಹಿತವಾದ ಭಾರತದ ಎಲ್ಲ ಉತ್ಪನ್ನಗಳಿಗೆ ಜಗತ್ತೇ ಮುಕ್ತವಾಗಿ ತೆರೆದುಕೊಂಡಿರುವುದರಿಂದ ಕ್ಯಾಂಪ್ಕೋ ಕೂಡ ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಬ್ರ್ಯಾಂಡ್‌ನ್ನು ಕಂಡುಕೊಳ್ಳಲು ಯೋಜನೆ ಹಾಕಿಕೊಂಡಿದೆ. ಅಡಕೆಯ ಮೌಲ್ಯವರ್ಧಿತ ಉತ್ಪನ್ನ, ಅಡಕೆ ಮಾರಾಟ ಮಾತ್ರವಲ್ಲ

ಚಾಕಲೇಟ್ ಉತ್ಪಾದನೆಯಲ್ಲೂ ಕ್ಯಾಂಪ್ಕೋ ಜಾಗತಿಕ ಸ್ಪರ್ಧೆಗೆ ಮುಂದಾಗಲಿದೆ. ಅಡಕೆ ಎಲೆ ಚುಕ್ಕಿ ರೋಗ, ಹಳದಿ ರೋಗಗಳಿಗೆ ಕೇಂದ್ರ ಸರ್ಕಾರದ ನೆರವಿನಲ್ಲಿ ವಿವಿಧ ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆ. ಇನ್ನು ಒಂದು ವರ್ಷದಲ್ಲಿ ಕ್ಯಾಂಪ್ಕೋ ಕೂಡ ಗುಜರಾತ್ನ ಅಮೂಲ್ ಮಾದರಿಯಲ್ಲೇ ಅಡಕೆ ಬೆಳೆಗಾರರ ಸಮಸ್ಯೆ, ಪ್ರಶ್ನೆಗಳಿಗೆ ಸ್ಪಂದಿಸಲು ಕೃತಕ ಬುದ್ಧಿಮತ್ತೆ(ಎಐ) ನೆರವಿನ ತಾಂತ್ರಿಕತೆಯನ್ನು ಬಳಕೆ ಮಾಡಲು ಯೋಚಿಸುತ್ತಿದೆ ಎಂದರು.

ಕ್ಯಾಂಪ್ಕೋ ಸ್ಥಾಪಕ ವಾರಣಾಸಿ ಸುಬ್ರಾಯ ಭಟ್ಟರಿಗೆ ಮರಣೋತ್ತರವಾದರೂ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಸಿಗಬೇಕು, ಅಲ್ಲದೆ ಕೇಂದ್ರ ಸರ್ಕಾರದ ಪದ್ಮಶ್ರೀ ಗೌರವವೂ ಸಿಕ್ಕಿದರೆ ಅದುವೇ ಅಡಕೆ ಬೆಳೆಗಾರರಿಗೆ ಸಲ್ಲುವ ನಿಜವಾದ ಗೌರವ ಎಂದರು.

ಈ ಸಂದರ್ಭ ಬೆಳೆಗಾರರ ಮಿತ್ರ ಕ್ಯಾಂಪ್ಕೋ ಆಪ್‌ಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕ್ಯಾಂಪ್ಕೋ ಒಂದು ವಿಶ್ವವಿದ್ಯಾಲಯ ಇದ್ದಂತೆ. ಅಡಕೆ ಉತ್ಪಾದನೆಯಿಂದ ತೊಡಗಿ ಮಾರಾಟ ವರೆಗೆ ಎಲ್ಲ ಮಗ್ಗುಲುಗಳನ್ನೂ ಒಂದೇ ಕಡೆ ಕಲಿಯಲು ಸಾಧ್ಯ. ಅಡಕೆ ಕೃಷಿಗೆ ಸಂಬಂಧಿಸಿ ಬೇರೆ ಪದವಿ ಕಲಿಕೆಯ ಅಗತ್ಯ ಇಲ್ಲ ಎಂದರು.

ಕ್ಯಾಂಪ್ಕೋ ಹೊರತಂದ ಆಪ್ ಬೆಳೆಗಾರ ಸದಸ್ಯರಿಗೆ ಎಲ್ಲ ರೀತಿಯ ಮಾಹಿತಿಯನ್ನು ನೀಡಲಿದೆ. ಕೋಕೋ ಬೆಳೆಗಾರರ ಹಿತಾಸಕ್ತಿ ಕಾಪಾಡುವ ದಿಶೆಯಲ್ಲಿ ಮಾರುಕಟ್ಟೆ ಧಾರಣೆ ಏರಿಕೆಯಾದರೆ, ಅದೇ ಧಾರಣೆಯನ್ನು ಕೋಕೋ ಬೆಳೆಗಾರರಿಗೆ ನೀಡಲು ಮುಂದಾಗಬೇಕು ಎಂದರು.

ಸ್ಥಾಪನಾ ದಿನಾಚರಣೆ ಕುರಿತು ಭಾಷಣ ಮಾಡಿದ ಪ್ರಗತಿಪರ ಕೃಷಿಕ, ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಂಕರ್ ಸಾರಡ್ಕ, ಅಡಕೆ ಬೆಳೆಗಾರರ ಸಂಕಷ್ಟದ ಕಾಲದಲ್ಲಿ ಕ್ಯಾಂಪ್ಕೋ ಹಾಗೂ ಚಾಕಲೇಟ್ ಕಾರ್ಖಾನೆ ಸ್ಥಾಪಿಸಿದ ವಾರಣಾಸಿ ಸುಬ್ರಾಯ ಭಟ್ಟರ ದೂರದೃಷ್ಟಿತ್ವವನ್ನು ವಿವರಿಸಿದರು. ಅವರ ಕಾರ್ಯದಕ್ಷತೆ, ಶಿಸ್ತು, ಸಂಯಮ, ನಡವಳಿಕೆಗಳು ಎಲ್ಲರಿಗೂ ಮಾದರಿ. ಬಂಟ್ವಾಳ ತಾಲೂಕಿನ ಸಾರಡ್ಕ-ಪರಿಯಾಲ್ತಡ್ಕ ರಸ್ತೆಗೆ ವಾರಣಾಸಿ ಸುಬ್ರಾಯ ಭಟ್ಟರ ಹೆಸರು ಇರಿಸಬೇಕು. ಅಡ್ಯನಡ್ಕದಲ್ಲಿ ಪ್ರೀಮಿಯರ್ ಕ್ಯಾಂಪ್ಕೋ ಶಾಖೆ ತೆರೆಯಬೇಕು. ಇನ್ನಷ್ಟು ಮೌಲ್ಯವರ್ಧಿತ ಚಾಕಲೇಟ್ ಮಾರುಕಟ್ಟೆಗೆ ಬರಬೇಕು, ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಸಂಶೋಧನೆ ನಡೆಯಬೇಕು ಎಂದು ಆಶಿಸಿದರು.

ಈ ಸಂದರ್ಭ ಅಲ್ಯುಮೀನಿಯಂ ಏಣಿಯೇ ಮೊದಲಾದ ಕೃಷಿಕರ ಉಪಕರಣ ತಯಾರಿಸಿದ ಪ್ರಗತಿಪರ ಕೃಷಿಕ, ಉದ್ಯಮಿ ಪುತ್ತೂರು ಎಸ್‌ಆರ್ಕೆ ಲ್ಯಾಡರ್ಸ್ ಮಾಲೀಕ ಕೇಶವ ಅಮೈ ಅವರನ್ನು ಸನ್ಮಾನಿಸಲಾಯಿತು. 

ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಮುರಲೀಕೃಷ್ಣ ಪರಿಚಯಿಸಿದರು. ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article